ದಾವಣಗೆರೆ | ಶಿಕ್ಷಣ
ಕಂಪ್ಯೂಟರ್ ಸೈನ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೂ ವೈಯಕ್ತಿಕ ಹಿತ ಕಡೆಗಣಿಸಿ, ಸಮಾಜದ ಏಳ್ಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವವರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಡಿ.ಎಸ್. ಪ್ರಶಾಂತ್.
ಸದಾ ಸಮಾಜಸೇವೆಯ ತುಡಿತದ ಪ್ರಶಾಂತ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೈತುಂಬಾ ಸಂಬಳ ತರುವ ಹುದ್ದೆಯನ್ನು ತೊರೆದು ಸೇವೆಯಲ್ಲಿ ತೊಡಗಿದ್ದಾರೆ.
‘ಯೂತ್ ಫಾರ್ ಸೇವಾ’ ಸಂಸ್ಥೆಯ ಹೆಸರಿನಲ್ಲಿ ಸಮಾಜಮುಖಿ ಯುವಕರನ್ನು ಸಂಘಟಿಸಿಕೊಂಡು ಕುಗ್ರಾಮಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಇನ್ಫೊಸಿಸ್, ವಿಪ್ರೊ ಮುಂತಾದ ಕಾರ್ಪೊರೇಟ್ ಕಂಪನಿಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ನಿಧಿಯಡಿ ಶೇ 2ರಷ್ಟು ಮೊತ್ತವನ್ನು ಸಮಾಜಸೇವೆಗಾಗಿ ದೇಣಿಗೆ ನೀಡಲಾಗುತ್ತದೆ.
ಬೆಂಗಳೂರಿನ ಎಲ್ಲಾ ಕಂಪನಿಗಳಿಗೆ ವರ್ಷಪೂರ್ತಿ ಅಲೆದಾಡಿ, ಮನವೊಲಿಸಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಹರಿದುಬರಲು ಶ್ರಮಿಸುತ್ತಿದ್ದಾರೆ.
ಇದರ ಫಲವಾಗಿ ಜಗಳೂರು ತಾಲ್ಲೂಕಿನ 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಸ್ಪರ್ಶ ಕಾಣಬಹುದಾಗಿದೆ.
ಮೂವತ್ತೆಂಟು ಸರ್ಕಾರಿ ಶಾಲೆಗಳಿಗೆ ತಲಾ ₹ 1.5 ಲಕ್ಷ ವೆಚ್ಚದ ಕುಡಿಯುವ ನೀರು ಶುದ್ಧೀಕರಣ ಘಟಕ ಅಳವಡಿಕೆ, 12 ಶಾಲೆಗಳಿಗೆ ಸೋಲಾರ್ ಆಧಾರಿತ ಕಂಪ್ಯೂಟರ್ ಸ್ಮಾರ್ಟ್ ಕ್ಲಾಸ್ ಸೌಲಭ್ಯ, 27 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ , ಯುಪಿಎಸ್ ಅಳವಡಿಕೆ, ತಲಾ ₹ 3 ಲಕ್ಷ ವೆಚ್ಚದಲ್ಲಿ 5 ಶಾಲೆಗಳಿಗೆ ಹೈಟೆಕ್ ಶೌಚಾಲಯ, 15ಕ್ಕೂ ಹೆಚ್ಚು ಶಾಲೆಗಳ ಕಾಂಪೌಂಡ್‌ಗೆ ಸುಂದರ ವರ್ಲಿ ಪೇಂಟಿಂಗ್... ಹೀಗೆ ಹತ್ತು ಹಲವು ಸಾಧನೆಗಳನ್ನು ಪ್ರಶಾಂತ್ ಮಾಡಿದ್ದಾರೆ.
- ಡಿ. ಶ್ರೀನಿವಾಸ್