ಶಿರಸಿ | ಮೂಲ ವಿಜ್ಞಾನದಲ್ಲಿ ಸಂಶೋಧನೆ
‘I can see the future scientist in you' ಎಂದು ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅವರು ಭರವಸೆಯ ನೋಟದಲ್ಲಿ ಪ್ರಣವ್‌ನನ್ನು ಪ್ರೇರೇಪಿಸಿದ್ದರು. ‘ಸಹ್ಯಾದ್ರಿ ಯಂಗ್ ಇಕಾಲಾಜಿಸ್ಟ್’ ಪ್ರಶಸ್ತಿ ಸ್ವೀಕರಿಸುವಾಗ, ಏಳು ವರ್ಷಗಳ ಹಿಂದೆ ಹೇಳಿದ್ದ ಈ ಮಾತನ್ನು ನಿತ್ಯವೂ ಸ್ಮರಿಸಿಕೊಳ್ಳುವ ಯುವ ವಿಜ್ಞಾನಿ ಪ್ರಣವ್, ಅವರ ನಿರೀಕ್ಷೆಯನ್ನು ನಿಜಗೊಳಿಸಲು ಸಂಶೋಧನೆಯ ಬೆನ್ನೇರಿದ್ದಾರೆ.
ವೈದ್ಯಕೀಯ ಶಿಕ್ಷಣ ಓದಲು ಸಿಕ್ಕ ಅವಕಾಶವನ್ನು ಬಿಟ್ಟು, ಸಂಶೋಧನೆಯಲ್ಲೇ ಭವಿಷ್ಯವನ್ನು ಕಂಡಿರುವ ಪ್ರಣವ್ ಭಾರದ್ವಾಜ್ ಶಿರಸಿ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಬಿ.ಎಸ್ಸಿ ಅಂತಿಮ ವಿದ್ಯಾರ್ಥಿ. ಚಿಕ್ಕಂದಿನಿಂದ ವಿಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು, ವಿಜ್ಞಾನ ನಾಟಕ ನಿರ್ದೇಶನ, ಪ್ರಬಂಧ ಮಂಡನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ.
ಉತ್ತಮ ಬರಹಗಾರ, ಹಾಡುಗಾರ, ತಬಲಾ ವಾದಕರಾಗಿರುವ ಅವರು, ವಿಜ್ಞಾನ ಆಶುಭಾಷಣ, ಕಾವ್ಯಗೋಷ್ಠಿ, ಚರ್ಚೆ ನಡೆಸಲು ಸ್ನೇಹಿತರ ಜೊತೆಗೂಡಿ 'ಸಾಕ್ರಿಟಿಕ್ ಡೈಲಾಗ್' ವೇದಿಕೆ ರಚಿಸಿಕೊಂಡಿದ್ದಾರೆ. ಪ್ರಾಧ್ಯಾಪಕ ಗಣೇಶ ಹೆಗಡೆ ಮಾರ್ಗದರ್ಶನದಲ್ಲಿ ‘ಕೋಆರ್ಡಿನೇಷನ್ ಕೆಮೆಸ್ಟ್ರಿ’ ಮೇಲೆ ಸಂಶೋಧನೆ ನಡೆಸುತ್ತಿರುವ ಪ್ರಣವ್, ಜೈವಿಕ ಪ್ಲಾಸ್ಟಿಕ್, ಕೃತಕ ದ್ಯುತಿಸಂಶ್ಲೇಷಣ ಕ್ರಿಯೆ ಅಭಿವೃದ್ಧಿಪಡಿಸುವ ಹುಮ್ಮಸ್ಸಿನಲ್ಲಿದ್ದಾರೆ.
’ಚಿಕ್ಕವನಿದ್ದಾಗ ಮನೆಯಲ್ಲಿ ಅವಧಿ ಮೀರಿದ ಔಷಧಗಳೇ ನನ್ನ ಪ್ರಯೋಗದ ವಸ್ತುಗಳಾಗಿದ್ದವು. ಅಜ್ಜಿ ಕ್ಯಾನ್ಸರ್‌ನಿಂದ ಬಳಲಿದ್ದನ್ನು ಕಂಡ ಮೇಲೆ, ಇದಕ್ಕೊಂದು ಔಷಧ ಕಂಡುಹಿಡಿಯಬೇಕೆಂಬ ಗುರಿ ಮುಂದಿಟ್ಟು ಸಾಗಿದ್ದೇನೆ’ ಎನ್ನುವ ಪ್ರಣವ್, imagine, invent, innovate, inspire ಇವು ವಿಜ್ಞಾನ ವಿದ್ಯಾರ್ಥಿಗಳ ಮೂಲಮಂತ್ರವಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
–ಸಂಧ್ಯಾ ಹೆಗಡೆ ಆಲ್ಮನೆ