ಪ್ರಕಾಶ್‌ ಉಮ್ಮರಗೆ

ಬೀದರ್ | ಚಿತ್ರಕಲೆ

ದೇಸಿ ಕಲಾ ಶೈಲಿಯ ಮೋಡಿಗಾರ 

 

 

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಪ್ರಕಾಶ ಅಮೃತಪ್ಪ ಉಮ್ಮರಗೆ, ಗ್ರಾಮೀಣ ಸೊಗಡು ಹಾಗೂ ಆಧುನಿಕ ಶೈಲಿಯ ನಯವಂತಿಕೆ ಸೇರಿಸಿ ಎರಡನ್ನೂ ಏಕಕಾಲಕ್ಕೆ ಮಿಳಿತಗೊಳಿಸುವಲ್ಲಿ ಪರಿಣತರು. ಚಿತ್ರಕಲೆ ಹಾಗೂ ಮೂರ್ತಿ ನಿರ್ಮಾಣದಲ್ಲಿ ಸಿದ್ಧಹಸ್ತರು. 

 

14 ವರ್ಷಗಳಿಂದ ವಿಶಿಷ್ಟ ಶೈಲಿಯಲ್ಲಿ ನೂರಕ್ಕೂ ಹೆಚ್ಚು ಕಲಾಕೃತಿ ರಚಿಸಿದ್ದಾರೆ. ಇವರ ಕಲಾಕೃತಿಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಪ್ರದರ್ಶನ ಕಂಡು ಜನಮನ ಸೆಳೆದಿದೆ.

 

ಮೂರ್ತಿ ಕೆತ್ತನೆ ಹಾಗೂ ತಯಾರಿಕೆಯಲ್ಲೂ ಪ್ರಕಾಶ ಪಳಗಿದ್ದಾರೆ. ಈವರೆಗೆ 40ಕ್ಕೂ ಹೆಚ್ಚು ಶರಣರ ಮೂರ್ತಿ ಹಾಗೂ ಪ್ರತಿಮೆಗಳನ್ನು ಮಾಡಿಕೊಟ್ಟಿದ್ದಾರೆ. ನಾಡಿನ ವಿವಿಧ ಊರುಗಳಲ್ಲಿ ಅವುಗಳನ್ನು ಪ್ರತಿಷ್ಠಾಪಣೆ ಮಾಡಲಾಗಿದೆ. ಅಲ್ಲದೇ, ದೇವರ ಮೂರ್ತಿಗಳನ್ನೂ ಶಾಸ್ತ್ರೋಕ್ತವಾಗಿ ತಯಾರಿಸುವಲ್ಲಿ ಇವರ ಕೌಶಲ ಗೋಚರಿಸುತ್ತದೆ. 20ಕ್ಕೂ ಹೆಚ್ಚು ಕಲಾಶಿಬಿರ ನಡೆಸಿದ್ದಾರೆ. ಕುಂಚಕಾವ್ಯಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟ ಇವರ ಮನೆಯೇ ಒಂದು ಕಲಾಗ್ಯಾಲರಿಯಂತೆ ಕಾಣಿಸುತ್ತದೆ. ಪೋಷಣೆಗೆ ಕಾಯುತ್ತಿರುವ ಕಿರಿಯರನ್ನೂ ಕಲಾಪ್ರಪಂಚದಲ್ಲಿ ಕೈ ಹಿಡಿದು ನಡೆಸುವಲ್ಲಿ ಕ್ರಿಯಾಶೀಲರಾಗಿದ್ದಾರೆ.

 

‘ಇತ್ತೀಚಿನ ದಿನಗಳಲ್ಲಿ ಅಮೂರ್ತಕ್ಕೆ (ಅಬ್ಸ್‌ಟ್ರ್ಯಾಕ್ಟ್‌) ಮಾರುಹೋಗುತ್ತಿದ್ದಾರೆ. ನೈಜ ಸನ್ನಿವೇಶ, ಐತಿಹಾಸಿಕ ಸ್ಥಳಗಳನ್ನು ಚಿತ್ರಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಕರ್ನಾಟಕದ ಗತವೈಭವ, ಕನ್ನಡ ನಾಡಿನ ಹಿರಿಮೆ– ಗರಿಮೆ ಕುರಿತಾಗಿಯೇ ದೊಡ್ಡ ಪ್ರಮಾಣದ ಶಿಬಿರ ನಡೆಸಬೇಕು. ಅಂಥ ಕಲಾಕೃತಿಗಳನ್ನು ಎಲ್ಲೆಡೆ ಪ್ರದರ್ಶನ ಮಾಡಬೇಕು ಎಂಬ ಹಂಬಲ ನನ್ನದು’ ಎನ್ನುತ್ತಾರೆ ಅವರು.
 

-ಸಂತೋಷ ಈ. ಚಿನಗುಡಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು