ಪ್ರಕಾಶ್ ಜಯರಾಮಯ್ಯ

ರಾಮನಗರ | ಕ್ರಿಕೆಟಿಗ

ಅಂಧತ್ವ ಲೆಕ್ಕಿಸದೇ ‘ಪ್ರಕಾಶ’ಮಾನ

 

 

ಅಂಧರ ಕ್ರಿಕೆಟ್‌ ಜಗತ್ತಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಎಂದೇ ಹೆಸರಾದ ಪ್ರಕಾಶ್ ಜಯರಾಮಯ್ಯ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನ. ರಾಮನಗರ ಜಿಲ್ಲೆ ಚನ್ನಪಟ್ಟಣದವರು. ಭಾರತ ಅಂಧರ ಕ್ರಿಕೆಟ್‌ ತಂಡದ ಉಪ ನಾಯಕರಾಗಿರುವ ಅವರು ಈವರೆಗೆ 68 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 47 ಶತಕ ಸಿಡಿಸಿದ್ದಾರೆ. ವಿಕೆಟ್‌ ಕೀಪಿಂಗ್‌ ಜೊತೆಗೆ ತಂಡದ ಆರಂಭಿಕನಾಗಿ ಕಣಕ್ಕಿಳಿಯುತ್ತ ಬ್ಯಾಟಿಂಗ್‌ ಬೆನ್ನೆಲುಬಾಗಿ ನಿಂತಿದ್ದಾರೆ. 

 

ಪ್ರಕಾಶ್‌, ಆರು ತಿಂಗಳ ಮಗುವಾಗಿದ್ದಾಗಲೇ ಆಕಸ್ಮಿಕ ಘಟನೆಯೊಂದರಲ್ಲಿ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಮುಂದಿನ ಎಂಟು ವರ್ಷ ಸಂಪೂರ್ಣ ಅಂಧಕಾರದಲ್ಲಿದ್ದ ಅವರಿಗೆ ಶಸ್ತ್ರಚಿಕಿತ್ಸೆಯೊಂದರ ಮೂಲಕ ಬಲಗಣ್ಣಿಗೆ ಕೊಂಚ ದೃಷ್ಟಿ ಬಂತು. ಓದಿದ್ದು ಬಿ.ಎ. ಪದವಿ.

 

ರಾಮನಗರದ ಬಿಜಿಎಸ್‌ ಅಂಧರ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಓದಿದ ಪ್ರಕಾಶ್, ಗೆಳೆಯರ ಜತೆ ಆಡುತ್ತಾ ಕ್ರಿಕೆಟ್‌ ಬಗ್ಗೆ ಒಲವು ಬೆಳೆಸಿಕೊಂಡರು. ರಾಮನಗರದ ವಿಜಯ್‌ ಮರ್ಚೆಂಟ್‌ ಅಕಾಡೆಮಿಯಲ್ಲಿ ಐದು ವರ್ಷ ಆಡಿದ ಪ್ರಕಾಶ್‌, ಮುಂದೆ ‘ಸಮರ್ಥನಂ’ ಸಂಸ್ಥೆ ನಡೆಸಿದ ಟೂರ್ನಿಯಲ್ಲಿ ಉಳಿದ ಮೂರು ವಲಯಗಳ ವಿರುದ್ಧ ದ್ವಿಶತಕ ಸಿಡಿಸಿದ್ದು ರಾಷ್ಟ್ರೀಯ ಕ್ರಿಕೆಟ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಟ್ಟಿತು.

 

2010ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಛಾಪು ಒತ್ತಿದರು. ವೆಸ್ಟ್‌ ಇಂಡೀಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಸಿಡಿಸಿದ ಅತ್ಯಂತ ವೇಗದ ಶತಕ ವಿಶ್ವದಾಖಲೆ ಸೇರಿದೆ.

 

ಈವರೆಗೆ ಭಾರತ ಅಂಧರ ತಂಡ 2 ಟಿ–20 ವಿಶ್ವಕಪ್‌, 2 ಏಕದಿನ ವಿಶ್ವಕಪ್‌ ಹಾಗೂ 1 ಏಷ್ಯಾ ಕಪ್ ಸರಣಿ ಗೆದ್ದಿದೆ. 2014ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧದ ಅವರ 98 ರನ್‌ಗಳ ಅಬ್ಬರದ ಇನಿಂಗ್ಸ್ ಅನ್ನು ಪ್ರೇಕ್ಷಕರು ಮರೆತಿಲ್ಲ.

 

- ಆರ್‌.ಜಿತೇಂದ್ರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು