ಕೊಟ್ರೇಶ ಬಿ

ರಾಯಚೂರು | ಶಿಕ್ಷಣ

ಪೆನ್ಸಿಲ್ ಮಕ್ಕಳ ಪತ್ರಿಕೆಯಿಂದ ದಾಖಲಾತಿ ಹೆಚ್ಚಿಸಿದ ಶಿಕ್ಷಕ

 

 

ಮಕ್ಕಳನ್ನೇ ಸಂಪಾದಕರು ಮತ್ತು ವರದಿಗಾರರನ್ನಾಗಿಸಿ ಆರು ವರ್ಷಗಳಿಂದ ಸ್ವಂತ ಹಣದಿಂದ ನಾಲ್ಕು ಪುಟಗಳ ‘ಪೆನ್ಸಿಲ್’ ಮಾಸಪತ್ರಿಕೆ ಹೊರತರುತ್ತಿರುವ ಶಿಕ್ಷಕ ಕೊಟ್ರೇಶ.ಬಿ ಅವರು ಗ್ರಾಮಸ್ಥರಿಗೆ ಪ್ರಚಲಿತ ವಿದ್ಯಮಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೆಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವರು ‘ಪೆನ್ಸಿಲ್’ ಪತ್ರಿಕೆ ಮೂಲಕ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾರೆ. 

 

ಈ ಪತ್ರಿಕೆಯು ಒಂದೇ ಶಾಲೆಗೆ ಸೀಮಿತವಾಗಿಲ್ಲ. ಮನೆಮನೆಗೆ ವಿತರಣೆ ಮಾಡುವುದರ ಜೊತೆಗೆ ಅಂಚೆ ಮುಖಾಂತರ ಜಿಲ್ಲಾ ಮತ್ತು ತಾಲ್ಲೂಕು ಶಾಲೆಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮತ್ತು ಬೆಂಗಳೂರಿನ ಸಂಘ–ಸಂಸ್ಥೆಗಳ ಕಚೇರಿಗೆ ರವಾನಿಸಲಾಗುತ್ತದೆ. ಈ ಎಲ್ಲವನ್ನೂ ಮಕ್ಕಳೇ ನಿಭಾಯಿಸುತ್ತಾರೆ. ಅವರಿಗೆ ಪ್ರೇರಕ–ಮಾರ್ಗದರ್ಶಿಯಾಗಿ ಕೊಟ್ರೇಶ ಬಿ. ಸಹಕರಿಸುತ್ತಾರೆ.

 

ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ಆರ್ಥಿಕ ನೆರವಿನ ಜೊತೆಗೆ ಪ್ರಮುಖ ವಸ್ತುಗಳನ್ನು ದಾನ ಮಾಡುತ್ತಾರೆ. ಪಗಡದಿನ್ನಿ ವಲಯದ ಸಂಪನ್ಮೂಲ ವ್ಯಕ್ತಿಯಾಗಿ (ಸಿಆರ್‌ಪಿ) ಅವರು ಗಮನ ಸೆಳೆದಿದ್ದಾರೆ. 

 

ಶಾಲಾಭಿವೃದ್ಧಿಗೆ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಕೊಟ್ರೇಶ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ಪಡೆದಿದ್ದಾರೆ. ಮಕ್ಕಳಿಂದ ಗೊಂಬೆಯಾಟದ ತಂಡ ರಚಿಸಿ ಅನೇಕ ಕಡೆ ಪ್ರದರ್ಶನ ಮಾಡುವ ಮೂಲಕ ಅಳಿವಿನ ಹಂಚಿನಲ್ಲಿರುವ ಕಲೆ ಉಳಿಸಲು ಪ್ರಯತ್ನ ನಡೆಸಿದ್ದಾರೆ. 

 

-ರಾಹುಲ ಬೆಳಗಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು