ದೇವನಹಳ್ಳಿ | ತೋಟಗಾರಿಕೆ
ದೇವನಹಳ್ಳಿ ತಾಲ್ಲೂಕು ಗಡ್ಡದನಾಯಕನಹಳ್ಳಿಯವರಾದ ಪವನ್ ಕಲ್ಯಾಣ್ ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿ. ಅವರ ತಾಯಿ ತಾಲ್ಲೂಕು ಎಪಿಎಂಸಿ ಉಪಾಧ್ಯಕ್ಷರಾಗಿದ್ದಾಗ ರೈತರು ಸಾಲ ಪಡೆಯಲು ಎದುರಿಸುತ್ತಿರುವ ಸಮಸ್ಯೆ ಕಂಡವರು. ಅಂದಿನಿಂದಲೇ ತಾವೂ ಕೃಷಿಕರಾಗುವ ಸಂಕಲ್ಪ ತೊಟ್ಟರು. ಪ್ರಾಯೋಗಿಕವಾಗಿ ಮೂರು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದರು. ಈಗ ಅದರಿಂದ ಸುಮಾರು ₹ 90 ಲಕ್ಷ ಆದಾಯ ಪಡೆದಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗದ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು, ವಿದೇಶದವರೂ ಬಂದು ಬೆಳೆ ವೀಕ್ಷಿಸಿ ಹೋಗಿದ್ದಾರೆ. ಹಲವು ಕಡೆ ದಾಳಿಂಬೆ ಬೆಳೆ ಬಗ್ಗೆ ಉಪನ್ಯಾಸವನ್ನೂ ನೀಡಿದ್ದಾರೆ. ಪ್ರಸ್ತುತ ಬೆಂಗಳೂರು ನಗರದ ವಿವಿಧ ಪ್ರತಿಷ್ಠಿತ ಮಾಲ್‌ಗಳು ಮತ್ತು ಮಾರುಕಟ್ಟೆಗೆ ದಾಳಿಂಬೆ ಪೂರೈಸುತ್ತಿದ್ದಾರೆ.
ಸದ್ಯ ಪದವಿ ಓದುತ್ತಿರುವ ಅವರು ಮುಂದೆ ಪೂರ್ಣ ಪ್ರಮಾಣದಲ್ಲಿ ತೋಟಗಾರಿಕೆಯಲ್ಲಿ ತೊಡಗಿಕೊಳ್ಳುವ ಕನಸು ಹೊಂದಿದ್ದಾರೆ.
ದಾಳಿಂಬೆ ಕಸಿ ಘಟಕ ಸ್ಥಾಪಿಸುವ ಚಿಂತನೆ ಅವರಲ್ಲಿದೆ. ಸಮಗ್ರ ತೋಟಗಾರಿಕೆ ಮಾಡುವ ಕನಸು ಇದೆ. ಆನೇಕ ತಜ್ಞರಿಂದ ಸಲಹೆಗಳನ್ನು ಪಡೆಯುತ್ತಿದ್ದೇನೆ ಎಂದರು ಪವನ್.
ಜಮೀನು ಇರುವವರು ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಬೇಕು. ಬೇರೆ ಉದ್ಯೋಗದಲ್ಲಿ ಗಳಿಸಿದ ಆದಾಯವನ್ನು ಕೃಷಿಯಲ್ಲಿ ತೊಡಗಿಸಿ ಎಂದು ಸಲಹೆ ಮಾಡುತ್ತಾರೆ ಅವರು. ಕಸಿ ವಿಧಾನ ಜಿಲ್ಲೆಯಲ್ಲಿ ಯಾರು ಮಾಡಿಲ್ಲ. ಕಸಿವಿಧಾನ ಘಟಕದ ಚಿಂತನೆ ಇದೆ. ಐಟಿಬಿಟಿ ಕಂಪನಿಗಳಿಗೆ ಹೋದರೆ ಯಾವುದೇ ರೀತಿಯಿಂದ ಸಾಧನೆ ಮಾಡಲು ಸಾಧ್ಯವಿಲ್ಲ. ಇರುವ ಜಮೀನಿನಲ್ಲೇ ಬದ್ಧತೆಯಿಂದ ತೊಡಗಿ ಸಾಧನೆ ಸಾಧ್ಯ ಎನ್ನುತ್ತಾರೆ ಅವರು.
- ವಡ್ಡನಹಳ್ಳಿ ಭೋಜ್ಯನಾಯ್ಕ