ಚಾಮರಾಜನಗರ | ಜಾನಪದ ಕಲಾವಿದೆ (ಗಾಯನ)
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಸೋಲಿಗ ಸಮುದಾಯದ ಯುವತಿಯೊಬ್ಬರು ಗಿರಿಜನರ ಸಂಸ್ಕೃತಿ, ಹಾಡುಗಳನ್ನು ಜಗತ್ತಿನೆಲ್ಲೆಡೆ ಪಸರಿಸಲು ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರೇ ಪದ್ಮಾ ಬಸವರಾಜು.
27 ವರ್ಷ ಪದ್ಮಾ ಅವರು ಉತ್ತಮ ತಮಟೆ ವಾದಕಿಯೂ ಹೌದು. ಬೆಟ್ಟದಲ್ಲಿರುವ ಯರಕನಗದ್ದೆ ಪೋಡಿನವರಾದ ಪದ್ಮಾ ಅವರ ತಂದೆ ಬಸವರಾಜು ಜಾನಪದ ಕಲಾವಿದರು. ಹಾಗಾಗಿ, ಪದ್ಮಾ ಅವರಿಗೆ ಬಾಲ್ಯದಿಂದಲೂ ಜಾನಪದ ಕಲೆಯ ಬಗ್ಗೆ ಆಸಕ್ತಿ. ಸೋಲಿಗರ ಸಂಸ್ಕೃತಿ ಹಾಗೂ ಹಾಡುಗಳ ಬಗ್ಗೆ ಅವರಿಗಿದ್ದ ತುಡಿತವು ಶಿಕ್ಷಣವನ್ನು ಎಸ್ಸೆಸ್ಸೆಲ್ಸಿಯಲ್ಲೇ ಮೊಟಕುಗೊಳಿಸುವಂತೆ ಮಾಡಿತು.
ಬಸವರಾಜು ಅವರು ಕಟ್ಟಿಕೊಂಡಿರುವ ‘ಸೋಲಿಗ ಪುಸುಮಲೇತು ಕಲಾ ಸಂಘ’ದಲ್ಲಿ ಸಕ್ರಿಯವಾಗಿದ್ದುಕೊಂಡು ತಮಟೆ ವಾದನ, ಹಾಡುಗಾರಿಕೆಯಲ್ಲಿ ಪಳಗಿದ ಪದ್ಮಾ, 10 ಯುವತಿಯರನ್ನು ಸೇರಿಸಿಕೊಂಡು ‘ಗುಬ್ಬಿ ಅಲೆ ಕಲಾ ತಂಡ’ ಎಂಬ ಸಂಘ ಕಟ್ಟಿದ್ದಾರೆ. 2015ರಿಂದ ಈ ತಂಡ ಕಾರ್ಯಾಚರಿಸುತ್ತಿದ್ದು, ಇದರ ಅಡಿಯಲ್ಲಿ ಸೋಲಿಗ ಯುವತಿಯರಿಗೆ ಹಾಡುಗಾರಿಕೆ ಹೇಳಿಕೊಡುತ್ತಿದ್ದಾರೆ. ವಿವಿಧ ಪೋಡುಗಳಿಗೆ ಭೇಟಿ ನೀಡಿ ಗಾಯನದ ತರಬೇತಿ ನೀಡುತ್ತಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು, ವ್ಯಕ್ತಿಗಳು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪ್ರೋತ್ಸಾಹದೊಂದಿಗೆ ರಾಜ್ಯದ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
2014ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಸ್ವೀಡನ್‌ಗೆ ತೆರಳಿ ಅಲ್ಲಿ ಸೋಲಿಗರ ಹಾಡು, ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಲಂಡನ್‌ಗೂ ತೆರಳುವುದಕ್ಕೂ ವೇದಿಕೆ ಸಿದ್ಧವಾಗಿದೆ.
- ಸೂರ್ಯನಾರಾಯಣ ವಿ.