ಶಿರಾ | ಶಿಲ್ಪಕಲೆ
ಮಣ್ಣು ಎಂದರೆ ಎಂತಹ ಮಕ್ಕಳಿಗೂ ಪಂಚಪ್ರಾಣ, ದಿನವಿಡಿ ಮಣ್ಣಿನಲ್ಲೆ ಆಟ ಆಡುತ್ತಾ ಬೆಳೆಯುವ, ಕಾಲ ಕಳೆಯುವ ಮಕ್ಕಳಿದ್ದಾರೆ. ಹೀಗೆ ಆಟವಾಡುತ್ತಲೆ ಕಲೆಯನ್ನು ಕರಗತ ಮಾಡಿಕೊಂಡು, ಜೇಡಿಮಣ್ಣಿನಲ್ಲಿ ಸುಂದರ ಕಲಾಕೃತಿಗಳನ್ನು ನಿರ್ಮಿಸಿ ಸೈ ಎನಿಸಿಕೊಂಡವರು ಪಿ.ಎಸ್.ಮೇಘರಾಜು.
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ಡಿ.ಸಿ.ರಾಜಮ್ಮ, ಶಿವಣ್ಣ ದಂಪತಿಗಳ ಮಗನಾದ ಮೇಘರಾಜನಿಗೆ ಮಣ್ಣು ಎಂದರೆ ಪಂಚಪ್ರಾಣ. ಚೆಂಡಿನ ಗಾತ್ರದ ಜೇಡಿ ಮಣ್ಣು ಸಿಕ್ಕರೆ ಸಾಕು ಕುಳಿತಲ್ಲೆ ಏನಾದರೂ ಒಂದು ಕಲಾಕೃತಿಗಳನ್ನು ಮಾಡಿಬಿಡುತ್ತಾರೆ.
‘ನಾನು ಚಿಕ್ಕವನಾಗಿದ್ದಾಗ ನೋಡುತ್ತಿದ್ದ ಗಣೇಶನ ಮೂರ್ತಿ ನನಗೆ ಪ್ರೇರಣೆ ಎಂದು ಹೇಳಬಹುದು. ಎಷ್ಟು ಚೆನ್ನಾಗಿ ಮಣ್ಣಿನಲ್ಲಿ ಇದನ್ನು ಮಾಡಿದ್ದಾರೆ ಎಂದರೆ, ನಾನು ಸಹ ಮಾಡಬಹುದಲ್ಲ ಎಂದು ಕೊಂಡು 6 ವರ್ಷವಿದ್ದಾಗಲೆ ನನಗೆ ಅರಿವಿಲ್ಲದೆ ಇದರಲ್ಲಿ ತೊಡಗಿಸಿಕೊಂಡೆ. ಅದು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ’ ಎನ್ನುತ್ತಾರೆ ಮೇಘರಾಜು. ಇವರು ಇದುವರೆಗೂ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ದೆಗಳಲ್ಲಿ 400 ಬಾರಿ ಭಾಗವಹಿಸಿದ್ದಾರೆ. 25 ಸಾವಿರಕ್ಕೂ ಹೆಚ್ಚು ಗ್ರಾಮ ದೇವತೆಗಳ ಮೂರ್ತಿಗಳನ್ನು ಮಾಡಿದ್ದು. 100 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಕಲಾಕೃತಿ ಕುರಿತು ತರಬೇತಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವುದು ಇವರ ಸಾಧನೆ ಎಂದೇ ಹೇಳಬಹುದು.
‘ಸಮಾಜಮುಖಿ ಕಲಾಕೃತಿಗಳನ್ನು ಸೃಷ್ಟಿಸಬೇಕೆಂಬುದು ನನ್ನ ಅಭಿಲಾಷೆ. ಉತ್ತಮ ಗುರುಗಳು ದೊರೆತಲ್ಲಿ ಇದೇ ಕ್ಷೇತ್ರದಲ್ಲಿ ಮುಂದುವರೆಯಲು ತೀರ್ಮಾನಿಸಿದ್ದೇನೆ’ ಎಂಬುದು ಮೇಘರಾಜು ಅವರ ನುಡಿ.
-ಸೋಮಶೇಖರ್ ಎಸ್