ಪಿ.ಆರ್‌.ಅಯ್ಯಪ್ಪ

ಕೊಡಗು | ಪಿ.ಆರ್‌.ಅಯ್ಯಪ್ಪ

ಹೊಸ ಪ್ರಯೋಗದ ಬೋಧನೆ: ಅಯ್ಯಪ್ಪ ಸಾಧನೆ

 

ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ. ಅದನ್ನು ಅತ್ಯಂತ ಸರಳ ಹಾಗೂ ಪ್ರಾಯೋಗಿಕವಾಗಿ ಬೋಧಿಸಿ ಸಾಧನೆ ಮಾಡಿದವರು ಪಿ.ಆರ್‌.ಅಯ್ಯಪ್ಪ.

 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿದ್ದಾರೆ. ಅದಕ್ಕೂ ಮೊದಲು ಶಿಕ್ಷಕ ವೃತ್ತಿ. ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

 

2007ರಲ್ಲಿ ನಾಪೋಕ್ಲು ಸಮೀಪದ ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಈ ಕುಗ್ರಾಮದಲ್ಲಿ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಕಠಿಣವಾಗಿತ್ತು. ವಿದ್ಯಾರ್ಥಿಗಳಿಗೆ ಕಗ್ಗಂಟಾಗಿದ್ದ ಗಣಿತ ವಿಷಯವನ್ನು ಸರಳವಾಗಿ ಬೋಧಿಸಿ, ಫಲಿತಾಂಶ ಹೆಚ್ಚಳಕ್ಕೆ ಮುನ್ನುಡಿ ಬರೆದವರು ಅಯ್ಯಪ್ಪ. ಇವರು ದಾಖಲಾದ ವರ್ಷದಿಂದ ಗಣಿತ ಫಲಿತಾಂಶದಲ್ಲಿ ಚೇತರಿಕೆ ಕಾಣತೊಡಗಿತ್ತು. ಇವರು ನಡೆಸಿದ ಗಣಿತ ವಿಷಯದ ಬೋಧನಾ ವಿಷಯಕ್ಕೆ ಪ್ರಶಂಸೆಯೂ ವ್ಯಕ್ತವಾಗಿತ್ತು.

 

ಎಸ್ಸೆಸ್ಸೆಲ್ಸಿ ಮಕ್ಕಳ ಗಣಿತ ಫಲಿತಾಂಶ ಹೆಚ್ಚಳ ಸಲುವಾಗಿ ತಾವೇ ತಯಾರಿಸಿದ ಗಣಿತದ ಪಿಪಿಟಿ, ವಿಡಿಯೊಗಳು ಯೂಟ್ಯೂಬ್‌ನಲ್ಲಿವೆ. ಹೊಸ ಪ್ರಯೋಗದ ಮೂಲಕ ಬೋಧನೆ ಮಾಡಿದ್ದು, ಮಕ್ಕಳಿಗೂ ಗಣಿತ ವಿಷಯವನ್ನು ಕಲಿಯಲು ಸುಲಭವಾಯಿತು. ಇವರ ಸರಳ ಹಾಗೂ ಪ್ರಾಯೋಗಿಕ ಬೋಧನೆಗೆ ವಿದ್ಯಾರ್ಥಿಗಳು ಮಾರು ಹೋಗಿದ್ದರು. ವಿದ್ಯಾರ್ಥಿಗಳಲ್ಲೂ ಗಣಿತದ ಬಗ್ಗೆ ಆಸಕ್ತಿ ಬೆಳೆಯಲು ಕಾರಣವಾಗಿತ್ತು.

 

ರಾಜ್ಯ ವಿಜ್ಞಾನ ಪರಿಷತ್‌ ಪದಾಧಿಕಾರಿ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ವಿಜ್ ಮಾಸ್ಟರ್, ಪ್ರತಿಭಾ ಕಾರಂಜಿ ಸೇರಿದಂತೆ 80ಕ್ಕೂ ಅಧಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

 

- ಆದಿತ್ಯ ಕೆ.ಎ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು