ನಿಶಾ ಎನ್‌.ಪಾಟ್ಕರ್

ಶಿವಮೊಗ್ಗ | ಚೆಸ್‌

ಚೆಸ್‌ ಲೋಕದ ತಾರೆ

 

ಪ್ರಸ್ತುತ ವರ್ಷ ರಾಜ್ಯ ಮಹಿಳಾ ಚೆಸ್‌ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡವರು ಶಿವಮೊಗ್ಗದ ನಿಶಾ ಎನ್‌. ಪಾಟ್ಕರ್. 


ಹೊಸಮನೆ ಬಡಾವಣೆಯ ಉದ್ಯಮಿ ನಾಗರಾಜ್ ಪಾಟ್ಕರ್, ಭಾರತಿ ದಂಪತಿಯ ಪುತ್ರಿ. ವಿಶ್ವ ಚಾಂಪಿಯನ್‌ ವಿಶ್ವನಾಥ್ ಆನಂದ್ ಅವರಿದ ಸ್ಫೂರ್ತಿ ಪಡೆದ ಅವರು ಚೆಸ್‌ನತ್ತ ಆಸಕ್ತಿ ಬೆಳೆಸಿಕೊಂಡರು. ಸಹೋದರಿ ನೇಹಾ ಪಾಟ್ಕರ್ ಜತೆ ನಳಂದ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಓದುತ್ತಲೇ ಚೆಸ್ ಪ್ರಪಂಚದ ಒಂದೊಂದೆ ಮೆಟ್ಟಿಲೇರಿದರು. ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅವರು ಹಲವು ರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಎತ್ತಿ ಹಿಡಿದಿದ್ದಾರೆ.

 

ಶ್ರೀ ಕೃಷ್ಣ ಉಡುಪ ಅವರ ಬಳಿ ತರಬೇತಿ ಪಡೆದು ಉನ್ನತ ಸಾಧನೆ ತೋರಿದ್ದಾರೆ. 15 ವರ್ಷಗಳ ಹಾದಿಯಲ್ಲಿ 100ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರ ಸಾಧನೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಸೇರಿ ಹಲವು ಗಣ್ಯರಿಂದ ಪ್ರಶಂಸೆ ಪಡೆದಿದ್ದಾರೆ. 

 

ನಾಲ್ಕು ವರ್ಷಗಳಿಂದ ಚೆಸ್‌ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ, ಬೆಂಗಳೂರಿನ ಅಕಾಡೆಮಿಗಳಲ್ಲಿ ತರಬೇತಿ ನೀಡುವ ಜತೆಗೆ ಮುಂಬೈ, ಪಂಜಾಬ್, ದೆಹಲಿ, ಕೆನಡಾ, ಅಮೆರಿಕ ಆಟಗಾರರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. 

 

‘ತದೆ–ತಾಯಿ ಪ್ರೋತ್ಸಾಹ, ಶಿಕ್ಷಕರು, ತರಬೇತುದಾರರ ಮಾರ್ಗದರ್ಶನ, ಸತತ ಪರಿಶ್ರಮ, ಶ್ರದ್ಧೆ, ವಿಶ್ವನಾಥ್ ಆನಂದ್ ಅವರಂಥ ಸಾಧಕರ ಪ್ರೇರಣೆ ಚೆಸ್‌ನಲ್ಲಿನ ಸಾಧನೆಗೆ ಕಾರಣ. ಶಿವಮೊಗ್ಗದ ಹಲವು ಪ್ರತಿಭೆಗಳನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಹೊರತರುವ ಧ್ಯೇಯವಿದೆ’ ಎನ್ನುತ್ತಾರೆ ನಿಶಾ.


- ಚಂದ್ರಹಾಸ ಹಿರೇಮಳಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು