ನಿಪ್ಪಾಣಿ | ಕ್ರಿಕೆಟಿಗ
ನಿಪ್ಪಾಣಿಯ ನಿವಾಸಿ, 30 ವರ್ಷ ವಯಸ್ಸಿನ ನರೇಂದ್ರ ಮಾಂಗೋರೆ ವಿಶೇಷ ಕ್ರಿಕೆಟ್ ಸಾಧಕ. 2018ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಅಂಗವಿಕಲರ ಚೊಚ್ಚಲ ವಿಶ್ವಕಪ್ ಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿ ಆಡಿದ್ದಾರೆ.
ಬಿ.ಎಸ್ಸಿ. ಪದವೀಧರರಾದ ಅವರು ಕ್ರಿಕೆಟ್‌ನತ್ತ ಒಲವು ಬೆಳೆಸಿಕೊಂಡು ಸಾಧನೆ ತೋರುತ್ತಿದ್ದಾರೆ. ಎಐಸಿಎಪಿಸಿ (ಅಂಗವಿಕಲರ ಅಖಿಲ ಭಾರತ ಕ್ರಿಕೆಟ್ ಒಕ್ಕೂಟ) ಮುಂಬೈನಲ್ಲಿ ಅಜಿತ್ ವಾಡೇಕರ್ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿ ಆಯೋಜಿಸಿ ಭಾರತ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಿತ್ತು.
ಬೆಳಗಾವಿಯಲ್ಲಿ ನಡೆದ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಸಿರೀಸ್, ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಮೊದಲಾದ ಪ್ರಶಸ್ತಿಗಳೊಂದಿಗೆ 2 ದ್ವಿಚಕ್ರ ವಾಹನಗಳು, 3 ಬೈಸಿಕಲ್‌ಗಳು, ಟಿ.ವಿ. ಮೊದಲಾದವುಗಳನ್ನು ಗೆದ್ದಿದ್ದಾರೆ.
2016–17ರಲ್ಲಿ ಕೆಪಿಎಲ್‌ನಲ್ಲೂ ಅವರು ಆಡಿದ್ದಾರೆ. ಡಿಸೆಂಬರ್‌ನಲ್ಲಿ ಅಪ್ಘಾನಿಸ್ತಾನ್ ತಂಡದ ವಿರುದ್ಧ ನಡೆದ ಕ್ರಿಕೆಟ್ ಟೂರ್ನಿಯಲ್ಲಿ 3–0 ಅಂಕಗಳಿಂದ ಭಾರತ ಗೆದ್ದಿತ್ತು. ಆಗ ನರೇಂದ್ರ ಸರಣಿ ಶ್ರೇಷ್ಠ ಹಾಗೂ 3ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ದಕ್ಷಿಣ ವಲಯ ತಂಡದ ನಾಯಕರೂ ಆಗಿದ್ದರು. 2012ರಲ್ಲಿ ಬೆಳಗಾವಿಯಲ್ಲಿ ವಲಯಮಟ್ಟದ ಟೂರ್ನಿಯಲ್ಲಿ 40 ಓವರ್‌ಗಳ ಪಂದ್ಯದಲ್ಲಿ 234 ರನ್‌ಗಳನ್ನು ಬಾರಿಸಿ ಗಮನಸೆಳೆದಿದ್ದರು.
‘ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದೇ ನನ್ನ ಸಾಧನೆಗೆ ಸ್ಫೂರ್ತಿ’ ಎನ್ನುತ್ತಾರೆ ನರೇಂದ್ರ.
- ಎಂ.ಮಹೇಶ