ನಾರಾಯಣ ಹೆಗಡೆ

ಶಿರಸಿ | ಸಾಮಾಜಿಕ ಕ್ಷೇತ್ರ

2,500ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಿ, ಅವರ ಸ್ವಾವಲಂಬಿ ಬದುಕಿಗೆ ಸಹಕಾರ

 

ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡುವುದಕ್ಕಿಂತ ನಾಲ್ಕು ಜನರ ನಡುವೆ ಕೆಲಸ ಮಾಡಿ ಬದಲಾವಣೆಯ ಬೆಳಕು ಹರಡುವ ಕನಸಿನೊಂದಿಗೆ ಸಾಮಾಜಿಕ ಕ್ಷೇತ್ರವನ್ನು ಆಯ್ದುಕೊಂಡವರು ಶಿರಸಿ ತಾಲ್ಲೂಕಿನ ಕುಗ್ರಾಮವಾಗಿರುವ ಶಿರಸಗಾಂವದ ನಾರಾಯಣ ಹೆಗಡೆ.

 

ಬಿ.ಕಾಂ ಪದವಿ ಪಡೆದು, ಮಧುರೈನ ಟಾಟಾ-ಧಾನ್- ಅಕಾಡೆಮಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಅಭಿವೃದ್ಧಿ ನಿರ್ವಹಣೆಯ ಅಧ್ಯಯನ ಮಾಡಿದ ಅವರು, ಮೈಸೂರಿನ ಧಾನ್ ಫೌಂಡೇಷನ್‌ ಸೇರಿ, ಹಲವಾರು ಬಡ ಮಹಿಳೆಯರ ಆರ್ಥಿಕ ಉನ್ನತಿಗೆ ಕಾರಣರಾಗಿದ್ದಾರೆ. ಬನ್ನೂರು ಕುರಿ ತಳಿ ಸಂರಕ್ಷಣೆ, 1000ಕ್ಕೂ ಅಧಿಕ ಸಸಿ ನಾಟಿ, ಬೀಜದುಂಡೆ ಬಿತ್ತನೆ, ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರಾಥಮಿಕ ಚಿಕಿತ್ಸೆಯ ಕಿಟ್ ವಿತರಣೆಯಂತಹ ಅನೇಕ ಕ್ರಿಯಾಶೀಲ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ.

 

ರಕ್ತಹೀನತೆಯಿಂದ ಬಳಲುತ್ತಿದ್ದ ಪಿರಿಯಾಪಟ್ಟಣದ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದವರು ನಾರಾಯಣ. 2,500ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಿ, ಅವರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದ್ದಾರೆ.

 

‘ನನ್ನೂರಿಗೆ ಹೋಗಲು ಇನ್ನೂ ಸರಿಯಾದ ರಸ್ತೆಯಿಲ್ಲ. ಅಪ್ಪ–ಅಮ್ಮ ಕಷ್ಟಪಡುವುದನ್ನು ಕಂಡಿದ್ದೆ. ಇದೇ ಈ ಕ್ಷೇತ್ರಕ್ಕೆ ನನ್ನನ್ನು ಸೆಳೆಯಿತು. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಅಲ್ಲಿರುವವರಿಗೆ ನೆರವಾಗಲು ಸ್ನೇಹಿತರೊಡಗೂಡಿ ‘ಶ್ರಮಿಕ’ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಯುವಜನರು ಹಣ ಗಳಿಕೆಯೆಂಬ ಬಣ್ಣದ ದುನಿಯಾಕ್ಕೆ ಆಕರ್ಷಿತರಾಗುವ ಬದಲು, ನೆಮ್ಮದಿ ಸಿಗುವ ಸಾಮಾಜಿಕ ಕಾರ್ಯ ಮಾಡುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ನಾರಾಯಣ ಹೆಗಡೆ.

 

–ಸಂಧ್ಯಾ ಹೆಗಡೆ ಆಲ್ಮನೆ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು