ನಂದಿತಾ ನಾಗನಗೌಡರ

ಹುಬ್ಬಳ್ಳಿ | ಪರ್ವತಾರೋಹಿ

ಮೌಂಟ್‌ ಎವರೆಸ್ಟ್‌ (8,848 ಮೀಟರ್ ಎತ್ತರ) ಏರಿ ಸೈ ಎನಿಸಿಕೊಂಡಿರುವ ಸಾಹಸಿ

 

ಏಷ್ಯಾ, ಯುರೋಪ್‌, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿರುವ ಅತಿ ಎತ್ತರದ ಶಿಖರಗಳ ತುತ್ತತುದಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರುವ ಹುಬ್ಬಳ್ಳಿಯ ಸಾಹಸಿ ಯುವತಿ ನಂದಿತಾ ನಾಗನಗೌಡರ (31).

 

‌ಮನಾಲಿಯಲ್ಲಿ ಪರ್ವತಾರೋಹಣದ ತರಬೇತಿ ಪಡೆದಿರುವ ನಂದಿತಾ, 2016ರಲ್ಲಿ ಮೌಂಟ್‌ ಎವರೆಸ್ಟ್‌ (8,848 ಮೀಟರ್ ಎತ್ತರ) ಏರಿ ಸೈ ಎನಿಸಿಕೊಂಡಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾದ ಕಾರ್‌ಸ್ಟೆಂಜ್‌ ಪಿರಾಮಿಡ್‌ (4884 ಮೀಟರ್‌), ಆಫ್ರಿಕಾದ ಕಿಲಿಮಾಂಜಿರೋ ಪರ್ವತ (5960 ಮೀಟರ್‌), 2018ರಲ್ಲಿ ರಷ್ಯಾದ ಎಲ್‌ಬ್ರಿಸ್‌ ಪರ್ವತ (5651 ಮೀಟರ್‌) ಏರಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

 

‘ಪ್ರಪಂಚದ ಏಳು ಖಂಡಗಳ ಪೈಕಿ ಈಗಾಗಲೇ ನಾಲ್ಕು ಖಂಡಗಳ ಅತಿ ಎತ್ತರದ ಶಿಖರಗಳನ್ನು ವೈಯಕ್ತಿಕ ಖರ್ಚಿನಲ್ಲಿ ಏರಿದ್ದೇನೆ. ಇನ್ನುಳಿದ ಮೂರು ಖಂಡಗಳ ಶಿಖರಗಳ ಮೇಲೆ ಭಾರತದ ಧ್ವಜವನ್ನು ಹಾರಿಸುವೆ’ ಎನ್ನುವ ನಂದಿತಾ ಕಂಪ್ಯೂಟರ್ ಸೈನ್ಸ್‌ ಪದವೀಧರೆ. ಇಂಗ್ಲೆಂಡಿನ ಕೋವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಇಂಟರ್‌ನ್ಯಾಷನಲ್‌ ಬಿಸಿನೆಸ್‌ನಲ್ಲಿ ಎಂಬಿಎ ಓದಿ, ಅಲ್ಲೇ ವೃತ್ತಿ ಜೀವನವನ್ನೂ ಆರಂಭಿಸಿದ್ದಾರೆ.

 

12 ರಾಷ್ಟ್ರಗಳ ಒಕ್ಕೂಟ ಅಸಿಯಾನ್‌ದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆ ನಂದಿತಾ ನಾಗನಗೌಡರ ಪಾಲಿಗಿದೆ. ರಷ್ಯಾ ಮತ್ತು ಭಾರತದ ನಡುವಿನ ಸೌಹಾರ್ದ ವೃದ್ಧಿಯಲ್ಲೂ ನಂದಿತಾ ಪ್ರತಿನಿಧಿಯಾಗಿದ್ದು ಅವರಿಗೆ ಖುಷಿ ಕೊಟ್ಟಿದೆ. ಅಪರೂಪದ ಸಾಧನೆಯ ಮೂಲಕ ಗುರುತಿಸಿಕೊಂಡಿರುವ ಅವರು, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

 

- ಬಸವರಾಜ ಸಂಪಳ್ಳಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು