ಮಂಗಳೂರು | ಕೃಷಿ
ಕೃಷಿಕರೇ ಕೃಷಿ ಕ್ಷೇತ್ರದಿಂದ ವಿಮುಖವಾಗುತ್ತಿರುವ, ಯುವಜನತೆ ತಿರುಗಿಯೂ ನೋಡದಿರುವ ಸಂದಿಗ್ಧ ಕಾಲಘಟ್ಟದಲ್ಲಿ ಕೃಷಿಯಲ್ಲೇ ನಿಜವಾದ ಬದುಕಿದೆ ಎಂದು ನಾಟಿ ಮಾಡುತ್ತಿರುವವರು ನಾಗರಾಜ ಶೆಟ್ಟಿ ಅಂಬೂರಿ.
ಮಂಗಳೂರು ತಾಲ್ಲೂಕಿನ ಬೆಳುವಾಯಿ ಗ್ರಾಮದ ಸಪ್ತಗಿರಿಧಾಮ ಅಂಬೂರಿಯ ನಾಗರಾಜ ಶೆಟ್ಟಿ ಅಂಬೂರಿ ಅಂತಹ ಕೃಷಿಯಲ್ಲೇ ಬದುಕಿ ಬೆಳೆಯುತ್ತಿರುವ ಯುವಕ. ಅರ್ಥಾತ್ ನೈಜ ಸಾಧಕ.
ಬಾಲ್ಯದಲ್ಲಿ ತಾಯಿ ಯಶೋಧಾ ಶೆಟ್ಟಿ, ಪಿಯುಸಿಯಲ್ಲಿ ಇರುವಾಗ ತಂದೆ ಮುದ್ದುಶೆಟ್ಟಿಯನ್ನು ಕಳೆದುಕೊಂಡ ನಾಗರಾಜ ಶೆಟ್ಟಿ ಅವರು, ಡಿಪ್ಲೊಮಾ ಮಾಡಿದರು. ಆಗಲೇ ಸರ್ಕಾರಿ ಕೆಲಸಕ್ಕೆ ಸೇರುವ ಅವಕಾಶವು ಬಂದಿತ್ತು. ಆದರೆ, ಮನೆಯ ಸ್ಥಿತಿ ಹಾಗೂ ಕುಟುಂಬದ ಕೃಷಿಭೂಮಿಯು ಅವರನ್ನು ಊರು ಬಿಟ್ಟು ಹೋಗದಂತೆ ಮಾಡಿತು. ಆ ಸಂದರ್ಭದಲ್ಲಿ ಅವರು ಛಲದಿಂದ ಕೃಷಿಯನ್ನೇ ನೆಚ್ಚಿಕೊಂಡರು.
ಕೃಷಿಯಲ್ಲಿ ಅಡಿಕೆ, ತೆಂಗು, ಬಾಳೆಯ ಜೊತೆಗೆ ಕೊಕ್ಕೊ, ಬಾಳೆ, ತರಕಾರಿ ಇತ್ಯಾದಿಗಳ ಮಿಶ್ರ ಬೆಳೆಗಳನ್ನು ಪ್ರಯೋಗಿಸಿದರು. ಅದರ ಜೊತೆಗೆ ಪಶು ಸಂಗೋಪನೆ, ಕೋಳಿ ಸಾಕಾಣಿಕೆಯನ್ನೂ ಮಾಡಿದರು. ಅಲ್ಲದೇ, ಸಂಘ–ಸಂಸ್ಥೆಗಳು ನಡೆಸುವ ಕೃಷಿ ಕುರಿತ ತರಬೇತಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತನ್ನ ಕಾಯಕವನ್ನೇ ಸುಸ್ಥಿರ–ಲಾಭದಾಯಕವಾಗಿ ಮಾಡಿಕೊಂಡರು. ಹೀಗೆ, ದಶಕದಿಂದ ತೊಡಗಿದ ಕೃಷಿಯು ಈಗ ಅವರ ಜೀವನ ಸಂಗಾತಿಯಾಗಿದೆ.
‘ಐ.ಟಿ. ಬಿ.ಟಿ, ಖಾಸಗಿ ಕಂಪೆನಿ ಉದ್ಯಮಗಳು ಬೀಳಬಹುದು. ಸರ್ಕಾರಿ ಉದ್ಯೋಗದಲ್ಲಿ ತ್ವರಿತ ಏಳಿಗೆ ಇಲ್ಲದಾಗಬಹುದು. ಖಾಸಗಿ ಉದ್ಯೋಗವು ಏಕಾಏಕಿ ಕೈ ಬಿಡಬಹುದು. ಆದರೆ, ಕೃಷಿ ಹಾಗಲ್ಲ. ಅದು ನಿಮ್ಮನ್ನು ನೆಲದಿಂದ ಕುಸಿಯಲು ಬಿಡುವುದಿಲ್ಲ. ನೀವು ಪ್ರೀತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡರೆ, ಕೃಷಿಯು ಪ್ರೀತಿಯಿಂದ ನಿಮ್ಮನ್ನು ಬೆಳೆಸುತ್ತದೆ. ಬದುಕು ಹಸಿರಾಗಿಸುತ್ತದೆ. ಯಾವುದೇ ಉದ್ಯೋಗ–ಉದ್ಯಮದಲ್ಲಿ ಇಲ್ಲದ ಸದಾ ನೆಮ್ಮದಿಯನ್ನು ಬದುಕಿನಲ್ಲಿ ನೀಡುತ್ತದೆ. ನಾನು ಅನುಭವಿಸುತ್ತಿದ್ದೇನೆ’ ಎನ್ನುತ್ತಾರೆ ನಾಗರಾಜ ಶೆಟ್ಟಿ ಅಂಬೂರಿ. ಅವರ ಸಾಧನೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಗೌರವ, ಜವಾಬ್ದಾರಿಗಳು ಹೆಗಲೇರಿವೆ.
- ಸದಾಶಿವ ಎಂ.ಎಸ್