ಕುಂಕಿಪಾಲ | ಯಕ್ಷಗಾನ ಸ್ತ್ರೀ ವೇಷಧಾರಿ
ಸ್ತ್ರೀಯೊಬ್ಬಳ ಉಮ್ಮಳವನ್ನು ಅನುಭವಿಸಿ ಪರಕಾಯ ಪ್ರವೇಶಿಸುವ, ಸಹಸ್ರಾರು ಪ್ರೇಕ್ಷಕರನ್ನು ಆ ಭಾವಲಹರಿಯಲ್ಲಿ ಬಂಧಿಸುವ ಕಲೆ, ಅದರಲ್ಲೂ ಯಕ್ಷಗಾನ ಕಲಾಪ್ರಕಾರದಲ್ಲಿ ದೊಡ್ಡ ಸವಾಲೇ ಸರಿ.
ಇಂಥ ಸವಾಲನ್ನು ಬದುಕಿನ ಭಾಗವಾಗಿ ಸ್ವೀಕರಿಸಿ, ಯಕ್ಷಗಾನದ ಸ್ತ್ರೀ ವೇಷದಲ್ಲಿ ಗಟ್ಟಿಹೆಜ್ಜೆ ಮೂಡಿಸಿದವರು ಯುವ ಕಲಾವಿದ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕುಂಕಿಪಾಲದ ನಾಗರಾಜ್ ಭಟ್ಟ.
ಬಡಗುತಿಟ್ಟಿನ ಯಕ್ಷಗಾನದಲ್ಲಿ ಪುರುಷ ಪಾತ್ರದಷ್ಟೇ, ಸ್ತ್ರೀ ಪಾತ್ರವೂ ಪ್ರಾಧಾನ್ಯ. ಯಕ್ಷಗಾನದ ರಂಗ ಸಾಧ್ಯತೆಗೆ ಒಪ್ಪುವ ಆಕರ್ಷಕ ಮೈಮಾಟ, ಭಾವಾಭಿವ್ಯಕ್ತಿ, ಒನಪು–ಒಯ್ಯಾರವನ್ನು ರಂಗದಲ್ಲಿ ಪ್ರಸ್ತುತಪಡಿಸುವುದು, ಯಕ್ಷಗಾನದ ಕಟುವಿಮರ್ಶಕರಿಂದ ಸೈ ಎನಿಸಿಕೊಳ್ಳುವುದು ಪುರುಷನೊಬ್ಬನಿಗೆ ಸುಲಭದ ಮಾತಲ್ಲ. ಆದರೆ, ನಾಗರಾಜ್‌ಗೆ ಇದು ಕಠಿಣವಲ್ಲ. ಚಿತ್ರಾಕ್ಷಿ, ಸುಭದ್ರೆ, ಭ್ರಮರ, ಕುಂತಳೆಯಂತಹ ಪೌರಾಣಿಕ ಪಾತ್ರಧಾರಿಯಾಗಿ ಅವರು ತೆರೆಗೆ ಬಂದರೆ, ಕಲ್ಲೆದೆಯ ನೋಡಗನೂ ಕ್ಷಣಕಾಲ ಸ್ತ್ರೀ ಹೃದಯಿಯಾಗಿ ಮಿಡಿಯುತ್ತಾನೆ.
ಹೈಸ್ಕೂಲ್ ಓದುವಾಗಲೇ ಯಕ್ಷ ಹೆಜ್ಜೆ ಪ್ರೀತಿಸಲಾರಂಭಿಸಿದ ನಾಗರಾಜ್, ಸುತ್ತಮುತ್ತಲಿನ ಹಳ್ಳಿಯಲ್ಲಿ ಎಲ್ಲೇ ಯಕ್ಷಗಾನ ಬಯಲಾಟದ ಸುದ್ದಿ ಸಿಕ್ಕರೂ ಹಾಜರಾಗುತ್ತಿದ್ದರು. ಮೊದಲ ಹೆಜ್ಜೆ ಕಲಿಯುವಾಗಲೇ, ಹಿಮ್ಮೇಳದ ಚೆಂಡೆಯಲ್ಲೂ ಕುತೂಹಲ ಮೂಡಿತು. ಹಿಮ್ಮೇಳದ ವಾದನ, ಮುಮ್ಮೇಳದ ಪಾತ್ರ ಎರಡನ್ನೂ ಶಾಸ್ತ್ರೀಯವಾಗಿ ಕಲಿತು, ಯಕ್ಷಗಾನ ಮೇಳದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಹಲವಾರು ಮೇಳಗಳಲ್ಲಿ ಪುರುಷ ಪಾತ್ರವನ್ನೂ ನಿರ್ವಹಿಸಿರುವ ಅವರು, ಪ್ರಸ್ತುತ ಪೆರ್ಡೂರು ಮೇಳದ ತಿರುಗಾಟದಲ್ಲಿದ್ದಾರೆ. ‘ಅಪ್ಪನಿಂದ ಬಳುವಳಿಯಾಗಿ ಬಂದಿರುವ ಕಲೆಯಿದು. ಕಲೆಯ ಆಸ್ವಾದನೆ, ಸಂಪಾದನೆ ಎರಡರಲ್ಲೂ ತೃಪ್ತಿಯಿದೆ’ ಎನ್ನುವ ನಾಗರಾಜ್, ಕೃಷಿಕರೂ ಹೌದು.
-ಸಂಧ್ಯಾ ಹೆಗಡೆ ಆಲ್ಮನೆ