ನಾಗರಾಜ್ ತೋಂಬ್ರಿ

ಸಾಗರ | ಜಾನಪದ ಜೋಗಿ ಕಲೆ

ಜೋಗಿ, ಗೀಗೀ ಪದಗಳ ಕಲಾವಿದ

 

ಇವರು ಓದಿದ್ದು 7ನೇ ತರಗತಿಯವರೆಗೆ ಮಾತ್ರ. ಕಾಲಿಗೆ ಗೆಜ್ಜೆ, ತಲೆಗೊಂದು ರುಮಾಲು ಕಟ್ಟಿ ಕೈಯಲ್ಲಿ ಕಿನ್ನರಿ, ತಾಳ, ಚಿಟಿಕೆ ಹಿಡಿದು ನಿಂತರೆ ಸತತವಾಗಿ ಮೂರು ತಾಸು ಜನಪದ ಸಂಗೀತ ಸುಧೆ ಹರಿಸಬಲ್ಲ ಕಲಾವಿದ ಇವರು.

 

ಸಾಗರ ತಾಲ್ಲೂಕಿನ ಆನಂದಪುರಂನ ನಾಗರಾಜ್ ತೋಂಬ್ರಿ ಅವರಿಗೆ ಜನಪದ ಗಾಯನ ರಕ್ತಗತ. 12 ವರ್ಷದ ಬಾಲಕನಾಗಿದ್ದಾಗಲೇ ತಂದೆಯ ಜೊತೆ ಕೈಯಲ್ಲಿ ಕಿನ್ನರಿ ಹಿಡಿದು ಮನೆ ಮನೆ ಸುತ್ತಿ ಜೋಗಿ ಪದ ಹಾಡಿದ್ದೇ ಈ ಪ್ರಕಾರದ ಸಂಗೀತದಲ್ಲಿ ಆಸಕ್ತಿ ಮೂಡಲು ಕಾರಣವಾಯಿತು.

 

ತಂದೆ ಗುಡ್ಡಪ್ಪ ತೋಂಬ್ರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರಾಗಿರುವ ಚಿಕ್ಕಪ್ಪ ಲಿಂಗಪ್ಪ ಜೋಗಿ ಅವರ ಗಾಯನವನ್ನು ಹುಟ್ಟಿನಿಂದಲೇ ಕೇಳಿದ ನಾಗರಾಜ್ ಅವರನ್ನೇ ಗುರುಗಳನ್ನಾಗಿ ಸ್ವೀಕರಿಸಿ, ಕಲೆಯ ಕಾಯಕಕ್ಕೆ ಮುಂದಾದವರು.

 

ಜೋಗಿ, ಗೀಗೀ ಪದಗಳ ಆಕರ್ಷಣೆಗೆ ಮಾರುಹೋದ ನಾಗರಾಜ್‌ಗೆ ಮೊದಲು ವೇದಿಕೆ ಕಲ್ಪಿಸಿದ್ದು ಯುವಜನ ಮೇಳಗಳು. ಬಟ್ಟೆಮಲ್ಲಪ್ಪ ಗ್ರಾಮದ ಹಿಂದೂಸ್ತಾನಿ ಯುವಕ ಸಂಘದ ಮೂಲಕ ಯುವಜನ ಮೇಳಗಳಲ್ಲಿ ಭಾಗವಹಿಸಿದ ನಂತರದಿಂದ ಅವರು ಹಿಂತಿರುಗಿ ನೋಡಿಲ್ಲ.

 

ನಾಗರಾಜ್ ಆನಂದಪುರಂನಲ್ಲಿ ‘ದುರ್ಗಾಮಾತೆ ಜಾನಪದ ಕಲಾ ಸಂಘ’ ಸ್ಥಾಪಿಸಿ ನಾಡಿನ ವಿವಿಧೆಡೆ ಸಂಗೀತ ಕಾರ್ಯಕ್ರಮ ನೀಡುವುದರಲ್ಲಿ ನಿರತರಾಗಿದ್ದಾರೆ. ಜೋಗಿ ಪದ, ಗೀಗೀ ಪದಗಳ ಜೊತೆಗೆ ಲಾವಣಿ, ರಂಗಗೀತೆ, ಭಾವಗೀತೆಗಳನ್ನೂ ಹಾಡುವುದನ್ನು ರೂಢಿಸಿಕೊಂಡಿದ್ದಾರೆ.

 

ಆಶಾ ಕಾರ್ಯಕರ್ತೆಯರಿಗೆ ಜಾನಪದ ಹಾಡುಗಳ ಮೂಲಕವೆ ತರಬೇತಿ ನೀಡಿರುವ ಅವರು ಶಿಕ್ಷಣ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಲ್ಲೂ ಕಲಾವಿದರಾಗಿ ಪಾಲ್ಗೊಂಡಿದ್ದಾರೆ. ಸಾಗರದ ‘ಸ್ವರಸಿರಿ’ ಸಂಗೀತ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.
 

- ರಾಘವೇಂದ್ರ ಎಂ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು