ಇ.ನಾಗರಾಜ್

ಚಿತ್ರದುರ್ಗ | ಕ್ರೀಡೆ

ಅಂತರರಾಷ್ಟ್ರೀಯ ಅಥ್ಲಿಟಿಕ್ಸ್‌ನಲ್ಲಿ ಭರವಸೆ ಮೂಡಿಸಿರುವ ದುರ್ಗದ ಹುಡುಗ


ಪ್ರೌಢಶಾಲೆಗೆ ಬಂದ ಅವಧಿಯಿಂದಲೂ ಓಟದ ಸ್ಪರ್ಧೆಯಲ್ಲಿ ಆಸಕ್ತಿ ಹೊಂದಿರುವ ಕ್ರೀಡಾಪಟು ನಾಗರಾಜ್ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಅವರು ವಿಶೇಷ ಸಾಧನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

 

ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಹೋಬಳಿಯ ಪಾತಪ್ಪನ ಗುಡಿ ಎಂಬ ಕುಗ್ರಾಮದಲ್ಲಿ ಜನಿಸಿದ ನಾಗರಾಜ್ ಓಬಳಾಪುರದಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದರು. ತಂದೆ ಈರಣ್ಣ, ತಾಯಿ ಚಂದ್ರಮ್ಮ ಇಬ್ಬರೂ ಕೂಲಿ ಕೆಲಸಗಾರರು. ಕಷ್ಟಪಟ್ಟು ಮಗನನ್ನು ಓದಿಸುತ್ತಿದ್ದಾರೆ.

 

ಕಿತ್ತು ತಿನ್ನುವ ಬಡತನ ಅವರನ್ನು ಕ್ರೀಡಾ ಕ್ಷೇತ್ರಕ್ಕೆ ಕರೆ ತಂದಿತು. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನದಾಗಿ ತೊಡಗಿಕೊಳ್ಳಲು ಪ್ರೌಢಶಾಲೆಯ ದೈಹಿಕ ಶಿಕ್ಷಕ ತುಕಾರಂ, ವಕೀಲ ಅಶೋಕ, ಘಟ್ಟಪರ್ತಿಯ ನವೀನ್ ಸಹಕಾರವೂ ಇದೆ.

 

ಕಾಲೇಜು ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಪಡೆಯುತ್ತಿರುವ ಇವರು ಗುಡ್ಡಗಾಡು, ಮ್ಯಾರಥನ್‌ನಲ್ಲಿ 500ಮೀ, 1000ಮೀ ಹಾಗೂ ದಸರಾ ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

 

ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿರುವ ಕ್ರೀಡಾಪಟು ನೇಪಾಳ, ವಿಯಾಟ್ನಂ, ತೈವಾನ್ ಸೇರಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧಾಳುವಾಗಿ ದೇಶವನ್ನು ಪ್ರತಿನಿಧಿಸಿದ್ದಾರೆ.

 

ಕ್ರೀಡಾ ಚಟುವಟಿಕೆಗಾಗಿ ನಿತ್ಯ ಒಂದಿಷ್ಟು ಸಮಯ ಮೀಸಲಿಟ್ಟಿದ್ದಾರೆ. ಅಥ್ಲೆಟಿಕ್‌ನಲ್ಲಿ ದೇಶ ಮೆಚ್ಚುವಂಥ ಉತ್ತಮ ಕ್ರೀಡಾಪಟು ಆಗಬೇಕು ಎಂಬ ಮಹದಾಸೆ ಹೊಂದಿದ್ದಾರೆ.

 

- ತಿಮ್ಮಯ್ಯ ಜೆ.ಪರಶುರಾಂಪುರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು