ಎನ್‌.ವೆಂಕಟೇಶ್ ಬಾಬು

ಚಿಕ್ಕಬಳ್ಳಾಪುರ | ವ್ಹೀಲ್‌ಚೇರ್‌ ಕತ್ತಿವರಸೆ

ವ್ಹೀಲ್‌ಚೇರಿನಲ್ಲಿಯೇ ಕತ್ತಿ ವರಸೆಯ ಸಾಹಸಿ

 

ಚಿಕ್ಕಂದಿನಲ್ಲಿ ಎತ್ತಿನ ಬಂಡೆಯಿಂದ ಬಿದ್ದು ಬಲಗಾಲು ಕಳೆದುಕೊಂಡು ಕೃತಕ ಕಾಲಿನೊಂದಿಗೆ ವಿದ್ಯಾರ್ಥಿ ಜೀವನದ ಪಯಣ ಮುಂದುವರಿಸಿದ ಆ ತರುಣನಿಗೆ, ಬೆಂಗಳೂರಿನಲ್ಲಿ 2012ರಲ್ಲಿ ಡಿಪ್ಲೊಮಾ ಓದುವ ವೇಳೆ ವ್ಹೀಲ್‌ಚೇರ್ ಫೆನ್ಸಿಂಗ್ (ಕತ್ತಿವರಸೆ) ಕಲಿಯಲು ತೆಗೆದುಕೊಂಡ ನಿರ್ಧಾರ ಆತನ ಬದುಕಿನ ದಿಕ್ಕನ್ನೇ ಬದಲಿಸಿ ಇವತ್ತು ಆತನನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದೆ.

 

ವ್ಹೀಲ್‌ಚೇರ್ ಫೆನ್ಸಿಂಗ್‌ನಲ್ಲಿ ಇಂದು ಅಂತರರಾಷ್ಟ್ರೀಯ ಪಟುವಾಗಿ ಬೆಳೆದ ಗೌರಿಬಿದನೂರು ತಾಲ್ಲೂಕಿನ ಎಚ್‌.ನಾಗಸಂದ್ರದ ಎನ್‌.ವೆಂಕಟೇಶ್ ಬಾಬು ಅವರೇ ಅಂಗವೈಕಲ್ಯ ಮೆಟ್ಟಿ ನಿಂತು, ‘ವಿಶ್ವ’ದ ಕದ ತಟ್ಟಿದ ಉತ್ಸಾಹಿ. ಕಾಲು ಕಳೆದುಕೊಂಡರೂ ಭರವಸೆ ಕಳೆದುಕೊಳ್ಳದೆ ಸಕಾರಾತ್ಮಕ ಚಿಂತನೆಗಳನ್ನು ಎದೆಗೂಡಿನಲ್ಲಿ ಕಾಪಿಟ್ಟುಕೊಂಡು, ಕತ್ತಿವರಸೆಯಲ್ಲಿ ಭರವಸೆಯ ‘ಪ್ರತಿಭೆ’ಯಾಗಿ ಹೊರಹೊಮ್ಮಿ ನಾಡಿಗೆ ಕೀರ್ತಿ ತರುತ್ತಿದ್ದಾರೆ.

 

ಕಳೆದ ಏಳು ವರ್ಷಗಳಲ್ಲಿ ಏಳು ರಾಷ್ಟ್ರೀಯ, ಎಂಟು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ, ಎರಡು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳಿಗೆ ಕೊರಳು ಒಡ್ಡಿರುವ ವೆಂಕಟೇಶ್‌ ಬಾಬು ಅವರ ಸಾಧನೆ ದಿನೇ ದಿನೇ ಆರೋಹಣದ ಹಾದಿಯಲ್ಲಿದೆ.

 

2017ರಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ವ್ಹೀಲ್‌ಚೇರ್‌ ಫೆನ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರದು. ಅಂಗವೈಕಲ್ಯ ಎನ್ನುವುದು ಒಂದು ಶಾಪ ಎಂದು ಕೀಳರಿಮೆ ಬೆಳೆಸಿಕೊಂಡು ಬದುಕಿನುದ್ದಕ್ಕೂ ನೋವಿನಲ್ಲೇ ಕೈತೊಳೆಯುವವರಿಗೆ ಇವರ ಈ ಸಾಧನೆ ಅನುಕರಣೀಯ.
 

 

-ಈರಪ್ಪ ಹಳಕಟ್ಟಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು