ಮರಿಲಿಂಗ

ಯಾದಗಿರಿ | ಕರಾಟೆ ಪಟು

‘ಸಾಹಸ’ ಬದುಕು ಕಟ್ಟಿಕೊಂಡು ಮಾದರಿಯಾದ ಯುವಕ

 

 

ಒಂದಿಲ್ಲೊಂದು ರೀತಿಯ ಸಂಕಷ್ಟ, ಸವಾಲುಗಳನ್ನು ಎದುರಿಸುತ್ತ ಬಡತನದಲ್ಲೇ ಬದುಕು ಕಟ್ಟಿಕೊಂಡವರು ಸಾಹಸ ಕಲಾವಿದ ಮರಿಲಿಂಗ. ಕನ್ನಡ, ತೆಲುಗು, ಮಲೆಯಾಳಂ ಸೇರಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಾಹಸ ಕಲಾವಿದರಾಗಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

 

ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಬಡ ದಂಪತಿಗೆ ಜನಿಸಿದ ಮರಿಲಿಂಗ, ಸಮಸ್ಯೆಗಳ ಸುಳಿಯಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದರು. ತಂದೆ–ತಾಯಿ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿದರೆ, ಮರಿಲಿಂಗ ಬಾಲ ಗಂಗಾಧರನಾಥ ಸ್ವಾಮೀಜಿ ಶಾಲೆಯಲ್ಲಿ 10ನೇ ತರಗತಿಯವರೆಗೆ ಶಿಕ್ಷಣ ಪಡೆದರು. ನಂತರ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ (ಐಟಿಐ) ಶಿಕ್ಷಣ ಪೂರೈಸಿದರು.

 

ಕರಾಟೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕರಾಟೆ ಪಟು ಜೋಗೇಂದ್ರ ಬಳಿ ತರಬೇತಿ ಪಡೆದರು. ಒಂದು ದಿನ ಪತ್ರಿಕೆಯಲ್ಲಿ ‘ಸಾಹಸ ಕಲಾವಿದರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೋಡಿ ಅವಕಾಶಕ್ಕಾಗಿ ಪ್ರಯತ್ನಿಸಿದರು. ಬೆಂಗಳೂರಿಗೆ ಹೋಗಿ, ಪ್ರಮುಖರನ್ನು ಭೇಟಿಯಾಗಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು.

 

‘ದಿ ವಿಲನ್’, ‘ಆಯುಷ್ಮಾನಭವ’, ‘ಕನಕ’, ‘ರವಿಚಂದ್ರ’, ‘ಇನ್‌ಸ್ಪೆಕ್ಟರ್‌ ವಿಕ್ರಂ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಮರಿಲಿಂಗ ತಮ್ಮೂರನ್ನು ಮರೆತಿಲ್ಲ. ಬಿಡುವು ಸಿಕ್ಕಾಗಲೆಲ್ಲ ಯರಗೋಳಕ್ಕೆ ಬಂದು ಸ್ನೇಹಿತರು ಮತ್ತು ಆತ್ಮೀಯರೊಂದಿಗೆ ಸಿನಿಮಾದ ಸಾಹಸಗಾಥೆಗಳನ್ನು ಹಂಚಿಕೊಳ್ಳುತ್ತಾರೆ.

-ರಾಹುಲ ಬೆಳಗಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು