ಮನೋಜ ನರಸಿಂಹಮೂರ್ತಿ

ದೇವನಹಳ್ಳಿ | ಸಮಾಜ ಸೇವೆ

ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯ

 

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕೃಷಿ ಕಾರ್ಮಿಕರಾದ ವೆಂಕಟಲಕ್ಷ್ಮಮ್ಮ, ಮುನಿಯಪ್ಪ ದಂಪತಿಯ ಮಗಳಾಗಿ ಜನಿಸಿದ ಇವರು, ಕಷ್ಟದ ಪರಿಸ್ಥಿತಿಯಲ್ಲೆ ಪ್ರಾಥಮಿಕ ಹಂತದಿಂದ ಡಿ.ಇಡಿ ಶಿಕ್ಷಣ ಪಡೆದರು. ವಿದ್ಯಾಭ್ಯಾಸದ ನಂತರ, ದೇವನಹಳ್ಳಿ ತಾಲ್ಲೂಕಿನ ಮುದುಗುರ್ಕಿ ಗ್ರಾಮದ ನರಸಿಂಹಮೂರ್ತಿ ಅವರನ್ನು ವಿವಾಹವಾದರು. ಈಗ ಮುದುಗುರ್ಕಿಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

 

ಬಿಡುವಿನ ವೇಳೆಯಲ್ಲಿ ಆರ್ಥಿಕ ಸಂಕಷ್ಟದಿಂದ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪೋಷಕರ ಮನವೊಲಿಸಿ, ಸರ್ಕಾರದ ಯೋಜನೆಗಳ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟು ಪುನಃ ಅವರನ್ನು ಶಾಲೆಗೆ ದಾಖಲು ಮಾಡಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಯುವಕರ ತಂಡ ಕಟ್ಟಿ, ಸರ್ಕಾರಿ ಜಾಗಗಳು ಸೇರಿದಂತೆ ಖಾಲಿ ಭೂಮಿ ಲಭ್ಯವಿರುವ ಕಡೆ ಸಸಿಗಳನ್ನು ನೆಟ್ಟು, ಪೋಷಣೆ ಮಾಡುವುದು, ಮಹಿಳೆಯರನ್ನು ಸಂಘಟಿಸಿ, ಸರ್ಕಾರದ ಯೋಜನೆಗಳ ಕುರಿತು, ಮಹಿಳಾ ಸಬಲೀಕರಣದ ಕುರಿತು ಅವರೊಂದಿಗೆ ಸಮಾಲೋಚನೆ ಮಾಡಿ ಅವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

 

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಅವರು ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು, ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. 

 

ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.

 

ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ, ಸರ್ಕಾರದಿಂದ ಹಳ್ಳಿಗಳ ಅಭಿವೃದ್ಧಿಗಾಗಿ ಬರುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನರಿಗೆ ಎಲ್ಲಾ ಸದಸ್ಯರೊಂದಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಶೌಚಾಲಯ ನಿರ್ಮಾಣದ ಬಗ್ಗೆ ಅರಿವು, ಮಳೆಯ ನೀರು ಸಂಗ್ರಹದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

 

- ಮುನಿನಾರಾಯಣ 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು