ಚಿತ್ರದುರ್ಗ | ಮನರಂಜನೆ
ಕನ್ನಡ ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕತೆ ಬರೆಯುತ್ತಿದ್ದ ಕಾದಂಬರಿಕಾರ ಬಿ.ಎಲ್.ವೇಣು ಅವರನ್ನು ನೋಡುತ್ತಲೇ ಬೆಳೆದ ಪುತ್ರ ಸಿ.ವಿ.ಮಂಜು ಚಿತ್ರ ನಿರ್ಮಾಣದತ್ತ ಹೊರಳಿದ್ದು ಅನಿರೀಕ್ಷಿತ. ಎಂಬಿಎ ಪದವೀಧರರಾಗಿ ಹೈದರಾಬಾದಿನಲ್ಲಿದ್ದ ಅವರು ಉದ್ಯೋಗ ತೊರೆದು ಚಂದನವನಕ್ಕೆ ಕಾಲಿಟ್ಟರು. ‘ಕಾಲೇಜ್’ ಹಾಗೂ ‘ದನಗಳು’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು.
ಪ್ರಯೋಗಕ್ಕೆ ಹೆಚ್ಚು ಅವಕಾಶವಿರುವ ಕಿರುಚಿತ್ರ ಮಂಜು ಅವರ ಆಸಕ್ತಿಯ ಕ್ಷೇತ್ರ. ‘ಮಡಿ ಮೈಲಿಗೆಯಾಚೆಗೆ’, ‘ಮಾಸ್ಕ್’, ‘ಟೆನ್ ಥೌಸೆಂಡ್’, ‘ಹಂಗರ್’ ಹಾಗೂ ‘ಡಬಲ್ ಕ್ರಾಸ್’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮುಂಬೈನಲ್ಲಿ ನಡೆದ ಮೊಬೈಲ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಹಂಗರ್’ ಛಾಪು ಮೂಡಿಸಿದೆ.
ಕಾಲ್ಪನಿಕ ಕಥಾವಸ್ತುವಿಗಿಂತ ವಾಸ್ತವಕ್ಕೆ ಹೆಚ್ಚು ಒತ್ತು ನೀಡುವುದು ಮಂಜು ಅವರ ವಿಶೇಷ. ಸಮಾಜದ ಸುತ್ತ ನಡೆಯುವ ಘಟನೆಗಳೇ ಕಿರುಚಿತ್ರದಲ್ಲಿ ಬಿಂಬಿತವಾಗಿವೆ. ಸಿನಿಮಾ ಮಾಧ್ಯಮದ ಮೂಲಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
‘ಸಿನಿಮಾಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ರೂಪಿಸಬೇಕಿದೆ. ಬಂಡವಾಳ ಹೂಡಿದವರ ನಿರೀಕ್ಷೆ ಹುಸಿ ಆಗದಂತೆ ಚಿತ್ರ ನಿರ್ಮಿಸಬೇಕು. ಕಿರುಚಿತ್ರಗಳಿಗೆ ಈ ಚೌಕಟ್ಟಿಲ್ಲ. ಸೃಜನಶೀಲತೆಗೆ, ಪ್ರಯೋಗಕ್ಕೆ ಒಡ್ಡಿಕೊಳ್ಳಲು ಸಾಕಷ್ಟು ಅವಕಾಶ ಸಿಗುತ್ತದೆ’ ಎಂಬುದು ಮಂಜು ನಂಬಿಕೆ.
ಸಿನಿಮಾ ನಿರ್ಮಾಣದ ಬಗ್ಗೆ ಅಕಾಡೆಮಿಕ್ ಅರ್ಹತೆ ಹೊಂದಿಲ್ಲದಿದ್ದರೂ ಅನುಭವ ಅನನ್ಯ. ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣಗೊಳ್ಳುವ ಕಿರುಚಿತ್ರಗಳು ಮಂಜು ಅವರನ್ನು ಸಿನಿಮಾ ಜಗತ್ತಿಗೆ ಕರೆತಂದಿವೆ.
–ನಾಗರಾಜ್ ಜಿ.ಬಿ