ಮಮತಾ ಕೇಳೋಜಿ

ಹಳಿಯಾಳ | ಕುಸ್ತಿಪಟು

ಕುಸ್ತಿಯಲ್ಲಿ ಭರವಸೆಯ ಕುಡಿ

 

ನಿತ್ಯ ನಸುಕಿನಲ್ಲಿ ಎದ್ದು ಹಳಿಯಾಳ ತಾಲ್ಲೂಕು ದುಸಗಿ ಎಂಬ ಪುಟ್ಟ ಹಳ್ಳಿಯಿಂದ 15 ಕಿ.ಮೀ ದೂರದ ಪಟ್ಟಣಕ್ಕೆ ಬರುವ ಮಮತಾಗೆ ಕುಸ್ತಿಯಲ್ಲಿ ರಾಷ್ಟ್ರ ಚಾಂಪಿಯನ್ ಆಗುವ ಕನಸು.

 

ಕೃಷಿಕ ಕುಟುಂಬದ ಮಮತಾ ಕೇಳೋಜಿ, ಹಳಿಯಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಕ್ರೀಡಾ ಹಾಸ್ಟೆಲ್‌ನಲ್ಲಿ ಉಳಿದು ಐದನೇ ತರಗತಿಯಿಂದ ಕುಸ್ತಿ ಕಲಿಯಲಾರಂಭಿಸಿದ ಈಕೆ, ಅಥೆನ್ಸ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಸಬ್ ಜೂನಿಯರ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು ಭಾರತಕ್ಕೆ ಹೆಮ್ಮೆ ತಂದವರು.

 

ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಪದಕ ಗಳಿಸಿರುವ ಮಮತಾ, ಈ ಬಾರಿ ಜೂನಿಯರ್‌ ಕುಸ್ತಿಯಲ್ಲಿ ರಾಷ್ಟ್ರ ಚಾಂಪಿಯನ್ ಆಗಲೇಬೇಕೆಂಬ ಛಲ ತೊಟ್ಟಿದ್ದಾರೆ. ಮಗಳ ಆಸೆಗೆ ನೀರೆರೆದಿರುವ ಅಪ್ಪ ಮಾರುತಿ ಕೇಳೋಜಿ, ಬೆಳಗಿನ ಜಾವ 5 ಗಂಟೆಗೆ ಮಗಳನ್ನು ಬೈಕ್‌ ಮೇಲೆ ಕರೆತಂದು ತರಬೇತಿ ಶಾಲೆಗೆ ಬಿಡುವ ಕೆಲಸವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ. 

 

‘ಕುಸ್ತಿ ಹಳಿಯಾಳದ ಹೆಮ್ಮೆಯ ಕ್ರೀಡೆ. ಈ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದು ಪ್ರತಿದಿನ ನಾಲ್ಕು ತಾಸು ಅಭ್ಯಾಸ ಮಾಡುತ್ತೇನೆ, ಮೂವರು ಕೋಚ್ ತರಬೇತಿ ನೀಡುತ್ತಾರೆ. ಭಾರತ ಕುಸ್ತಿ ಶಿಬಿರದಲ್ಲೂ ಭಾಗವಹಿಸಿದ್ದೇನೆ. ಕುಸ್ತಿ ಕಲಿಯುತ್ತೇನೆಂದು ಆಡಿಕೊಳ್ಳುವವರೇ ಈಗ ನನ್ನ ಪ್ರಯತ್ನವನ್ನು ಪ್ರಶಂಸಿಸುತ್ತಾರೆ. ಕುಸ್ತಿಪಟುಗಳಿಗೆ ಉದ್ಯೋಗಾವಕಾಶದಲ್ಲಿ ಮೀಸಲಾತಿ ಇಲ್ಲವೆನ್ನುವುದೇ ಸಣ್ಣ ಕೊರಗು’ ಎಂದರು ಮಮತಾ.
 

–ಸಂಧ್ಯಾ ಹೆಗಡೆ ಆಲ್ಮನೆ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು