ಮಲ್ಲಿಕಾರ್ಜುನ ಸಾಂಗ್ಲಿಯಾನ

ಯಾದಗಿರಿ | ಸಮಾಜ ಸೇವೆ

ಸಮಾಜ ಸೇವೆಯಲ್ಲಿ ಯಾದಗಿರಿಯ ‘ಸಾಂಗ್ಲಿಯಾನ’

 

 

ಹದಿನೈದು ವರ್ಷಗಳಿಂದ ಗರ್ಭಿಣಿಯರಿಗೆ ಉಚಿತ ಆಟೊ ಸೇವೆ ಒದಗಿಸುತ್ತಿರುವ ಮಲ್ಲಿಕಾರ್ಜುನ, ಯಾದಗಿರಿ ಜನರಿಗೆ ‘ಸಾಂಗ್ಲಿಯಾನ’ ಎಂದೇ ಪರಿಚಿತರು. 7ನೇ ತರಗತಿಯವರೆಗೆ ಓದಿರುವ ಅವರು ಮೊದಲು ಕಾಂಕ್ರೀಟ್‌ ಮಿಶ್ರಣದ ಕೆಲಸ ಮಾಡುತ್ತಿದ್ದರು.

 

ಗರ್ಭಿಣಿಯೊಬ್ಬರು ರಸ್ತೆಯ ಮೇಲೆ ನೋವು ಅನುಭವಿಸುತ್ತಿರುವುದನ್ನು ಕಂಡ ಅವರು, ಆ ದಿನವೇ ಗರ್ಭಿಣಿಯರಿಗೆ ನೆರವಾಗಲು ತೀರ್ಮಾನಿಸಿದರು. ಸಾಲ ಮಾಡಿ ಆಟೊರಿಕ್ಷಾ ಖರೀದಿಸಿದರು. ಅಂಗವಿಕಲರು, ಗರ್ಭಿಣಿಯರು, ವೃದ್ಧರಿಗೆ ಆಟೊದಲ್ಲಿ ಉಚಿತ ಸೇವೆ ನೀಡತೊಡಗಿದರು.

 

ಯಾದಗಿರಿ ನಗರದ ವಿದ್ಯಾರ್ಥಿನಿಯರ ವಸತಿ ನಿಲಯಗಳ ಪ್ರತಿಯೊಬ್ಬ ವಿದ್ಯಾರ್ಥಿನಿ ಬಳಿ ಮಲ್ಲಿಕಾರ್ಜುನ ಅವರ ದೂರವಾಣಿ ಸಂಖ್ಯೆ ಇದೆ. ಅನಾರೋಗ್ಯದ ಸಮಸ್ಯೆ ಕಾಡಿದರೆ ಆಸ್ಪತ್ರೆಗೆ ಕರೆದೊಯ್ಯಲು ವಿದ್ಯಾರ್ಥಿನಿಯರು ತಕ್ಷಣವೇ ಇವರಿಗೆ ಕರೆ ಮಾಡುತ್ತಾರೆ.

 

ಈವರೆಗೆ ಸಾವಿರಕ್ಕೂ ಹೆಚ್ಚು ಗರ್ಭಿಣಿಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಉಚಿತ ಆಟೊ ಸೇವೆ ಒದಗಿಸಿದ್ದಾರೆ. ಮಲ್ಲಿಕಾರ್ಜುನ ಅವರ ಸೇವೆಯನ್ನು ಕಂಡು ಜನರೇ ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ. 

 

‘ಜನರಿಗೆ ನೆರವಾಗುವುದೇ ನನ್ನ ಆಸೆ. ಇದಕ್ಕೆ ಶಂಕರ್‌ ನಾಗ್‌ ಅವರೇ ಪ್ರೇರಣೆ. ಹೀಗಾಗಿ, ಅವರ ಚಿತ್ರವನ್ನು ನನ್ನ ಆಟೊ ಹಿಂಬದಿ ಹಾಕಿಕೊಂಡು ನಿತ್ಯವೂ ಜನರ ಸೇವೆಯಲ್ಲಿ ತೊಡಗಿಕೊಂಡಿರುವೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಅಪರಿಚಿತ, ಅನಾಥ ವ್ಯಕ್ತಿಗಳ ಶವ ಸಿಕ್ಕರೆ ಮೊದಲು ಅಲ್ಲಿಗೇ ಹೋಗುತ್ತೇನೆ. ಶವ ಸಾಗಿಸಲು ನೆರವಾಗುವುದು ಮತ್ತು ಅಂತ್ಯಸಂಸ್ಕಾರ ಮಾಡುವುದು ನನ್ನ ರೂಢಿ. ಹಾಗಾಗಿ, ಎಲ್ಲಿಯೇ ಇಂಥ ಪ್ರಕರಣ ನಡೆದರೂ ಪೊಲೀಸರು ಹಾಗೂ ಸಾರ್ವಜನಿಕರು ನನಗೆ ಕರೆ ಮಾಡುತ್ತಾರೆ’ ಎನ್ನುತ್ತಾರೆ ಮಲ್ಲಿಕಾರ್ಜುನ.
 

-ರಾಹುಲ ಬೆಳಗಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು