ಮಲ್ಕುಂಡಿ ಮಹದೇವಸ್ವಾಮಿ

ಮೈಸೂರು‌ | ಸಮಾಜ ಸೇವೆ

ಬಯಲು ಬಹಿರ್ದೆಸೆ ವಿರುದ್ಧ ಚಳವಳಿ ಸಾರಿದ ಪಿಡಿಒ

 

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಮಲ್ಕುಂಡಿ ಮಹದೇವಸ್ವಾಮಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನಾಲ್ಕು ವರ್ಷದ ಹಿಂದೆ ಈ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಬಂದ ಬಳಿಕ ಬಯಲು ಬಹಿರ್ದೆಸೆ ವಿರುದ್ಧ ಚಳವಳಿ ಆರಂಭಿಸಿದ್ದು, ಕಕ್ಕಸ್ಸು ಕಂಡ ಕಡೆ ಅದರ ಮೇಲೆ ಮಣ್ಣು ಹಾಕುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕವೂ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ‘ಬಯಲುಶೌಚಮುಕ್ತ’ ಗ್ರಾಮ ಎಂಬ ಹಿರಿಮೆಗೂ ಪಾತ್ರವಾಗಿದೆ. ರಾಷ್ಟ್ರೀಯ ಪುರಸ್ಕಾರ, ಗಾಂಧಿ ಗ್ರಾಮ ‍ಪುರಸ್ಕಾರ ಪ್ರಶಸ್ತಿ ಸಂದಿದೆ. 

ಪ್ರತಿ ಶನಿವಾರ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈವರೆಗೆ ಸುಮಾರು 34 ಸಾವಿರ ವಿದ್ಯಾರ್ಥಿಗಳೊಂದಿಗೆ ಸಂವಾದ, ಚರ್ಚೆ ನಡೆಸಿದ್ದಾರೆ. ಮಕ್ಕಳ ಪ್ರತಿಭೆ ಪರಿಗಣಿಸಿ, ನಗದು ‍ಪುರಸ್ಕಾರ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡದಂತೆ, ಎಲ್ಲ ಸಮಾಜದ ಬಡವರ ಜೊತೆ ಕೆಲಸ ಮಾಡುವ ಮೂಲಕ ಸ್ಥಳೀಯರ ಪ್ರೀತಿ– ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ಯಾಟ್‌ಲೈಟ್‌ ಆಧರಿತ ಡಿಜಿಟಲ್ ಲೈಬ್ರೆರಿ, ಡಿಜಿಟಲ್ ಅಧ್ಯಯನ ಕೇಂದ್ರ ಸ್ಥಾಪಿಸಿದ್ದಾರೆ. ಪ್ರತಿ, ಶನಿವಾರ, ಭಾನುವಾರ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ.

‘ಅಂಬೇಡ್ಕರ್‌ ಕಣ್ಣೀರಿಟ್ಟ ಕ್ಷಣಗಳು’, ಗ್ರಾಮೀಣರ ಜನ–ಜೀವನದ ಮೇಲೆ ಬೆಳಕು ಚೆಲ್ಲುವ ‘ಕಕ್ಕಸು’ ಎಂಬ ಕೃತಿಗಳನ್ನು ಹೊರತಂದಿದ್ದಾರೆ.

 

- ಬಾಲಚಂದ್ರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು