ಕಲಬುರ್ಗಿ | ಸಮಾಜ ಸೇವೆ
ಮಾಲಾ ಎಸ್.ಐ. ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಧನ್ನೂರ ಗ್ರಾಮದವರು. ಸಮಾಜ ಸೇವೆ ಇವರ ಹವ್ಯಾಸ.
ಜಿಲ್ಲೆಯಲ್ಲಿ ಅನಾಥ, ನಿರ್ಗತಿಕ, ಕಿವುಡ ಹಾಗೂ ವಿಕಲಾಂಗ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾರೆ. ಅಸಹಾಯಕ ವೃದ್ಧರು, ಮತಿಭ್ರಮಣೆ ಆದವರಿಗೆ ಊಟ, ಹಾಸಿಗೆ, ಹೊದಿಕೆ ನೀಡುವುದು ಇವರ ಪ್ರವೃತ್ತಿ. ಕೊಳೆಗೇರಿಗಳ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಾರೆ. ಶಾಲೆಗೆ ಸೇರುವಂತೆ ಅವರನ್ನು ಪ್ರೇರೇಪಿಸುತ್ತಾರೆ. ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ನಿಯಮಿತವಾಗಿ ಸೇವೆ ಸಲ್ಲಿಸುತ್ತಾರೆ. ಕಿವುಡ– ಮೂಕ ಮಕ್ಕಳ ಶಾಲೆಗೆ, ಅನಾಥಾಶ್ರಮಗಳಿಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನೂ ನಿರಂತರವಾಗಿ ನೀಡುತ್ತಾರೆ. ಸುಮಾರು ಎಂಟು ವರ್ಷಗಳಿಂದ ಅವರ ಸೇವೆ ಮುಂದುವರಿದಿದೆ.
‘ಸಮಾಜ ಸೇವೆಗಾಗಿ ಮದುವೆಯನ್ನೂ ಆಗಿಲ್ಲ. ನನ್ನ ಈ ಸೇವೆಗೆ ತಂದೆ– ತಾಯಿ ಪ್ರೇರಣೆ ಕೂಡ ಇದೆ. ಸಹೋದರರು, ಗೆಳತಿಯರ ಬೆಂಬಲ ಇದೆ. ಎಸ್‌ಬಿಐ ಲೈಫ್ ಇನ್ಶುರೆನ್ಸ್‌ನಲ್ಲಿ ಏಜೆನ್ಸಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳದ ಅರ್ಧ ಭಾಗವನ್ನು ಸೇವೆಗೆ ಉಪಯೋಗಿಸುತ್ತೇನೆ’ ಎನ್ನುತ್ತಾರೆ ಮಾಲಾ.
‘ಅನಾಥರು, ಕುಷ್ಠರೋಗಿಗಳು, ಶೋಷಿತರು ಎಲ್ಲೇ ಇದ್ದರೂ ಅವರು ಇರುವ ಜಾಗಕ್ಕೇ ಹೋಗಿ ಪೌಷ್ಟಿಕ ಆಹಾರ ನೀಡುವುದು, ಚಳಿ– ಮಳೆಗಾಲದಲ್ಲಿ ಅವರು ಇದ್ದಲ್ಲಿಗೆ ಹೋಗಿ ಹಾಸಿಗೆ, ಹೊದಿಕೆ, ಸ್ವೆಟರ್, ಬಟ್ಟೆ, ಶಾಲು ನೀಡುತ್ತೇನೆ’ ಎಂದು ಮಾಲಾ ಹೇಳುತ್ತಾರೆ.
-ಗಣೇಶ ಡಿ. ಚಂದನಶಿವ