ಮಹೇಶ್ವರ ಎನ್‌.

ಮೈಸೂರು‌ | ಕಲಾವಿದ

ಮಿನಿಯೇಚರ್‌ ಮ್ಯೂಸಿಯಂ ಕನಸು

 

ಮೈಸೂರು ನಗರದ ಹೆಬ್ಬಾಳ ನಿವಾಸಿ, 31ರ ಹರೆಯದ ಮಹೇಶ್ವರ ಎನ್‌. ‌ಮಿನಿಯೇಚರ್ (ತದ್ರೂಪ) ಕಲೆಯಲ್ಲಿ ಪರಿಣತಿ ಸಾಧಿಸಿದ್ದಾರೆ. ಅವರು ನಿರ್ಮಿಸಿದ ಹೈಕೋರ್ಟ್‌ ಕಟ್ಟಡದ ಮಾದರಿಯನ್ನು ಸುಪ್ರೀಂ ಕೋರ್ಟ್‌ನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟಿರುವುದು ವಿಶೇಷ.

ಮೈಸೂರಿನ ಪೊಲೀಸ್ ಭವನ, ಪೊಲೀಸ್‌ ಕಮಿಷನ್‌ ಕಚೇರಿ, ಲಲಿತ ಮಹಲ್ ಕಟ್ಟಡಗಳ ಮಿನಿಯೇಚರ್‌ಗಳನ್ನು ನಿರ್ಮಿಸಿದ್ದಾರೆ. ಮೈಸೂರಿನಲ್ಲಿ ಸುಮಾರು 412 ಪಾರಂಪರಿಕ ಕಟ್ಟಡಗಳಿದ್ದು, ಅವುಗಳ ಮಾದರಿಗಳನ್ನು ಒಳಗೊಂಡ ಮಿನಿಯೇಚರ್‌ ಮ್ಯೂಸಿಯಂ ‌ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ನಾಲ್ಕೈದು ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನೂ ಸಿದ್ಧಪಡಿಸಿದ್ದಾರೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ನಟರಾಜು ಮತ್ತು ಸೌಭಾಗ್ಯಾ ಇವರ ತಂದೆ ತಾಯಿ. ಇವರು ಮಿನಿಯೇಚರ್ ಅಥವಾ ಚಿತ್ರಕಲೆಗೆ ಸಂಬಂಧಿಸಿದಂತೆ ಯಾವುದೇ ಕೋರ್ಸ್ ಮಾಡಿಲ್ಲ. ಬಾಲ್ಯದಲ್ಲಿ ಮಣ್ಣಿನಲ್ಲಿ ವಿವಿಧ ಗೊಂಬೆ ತಯಾರಿಸುವುದು, ಬೆಂಕಿಪೊಟ್ಟಣದ ಕಡ್ಡಿಗಳಿಂದ ಮನೆ ಕಟ್ಟುತ್ತಿದ್ದರು. ಆನಂತರ ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ.

ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿರುವ ಇವರು 2007ರಲ್ಲಿ ಬಿಎಸ್‌ಎಫ್‌ಗೆ ಸೇರಿ 3 ವರ್ಷಗಳವರೆಗೆ ಕೆಲಸ ಮಾಡಿದ್ದರು. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ 2010ರಲ್ಲಿ ಬಿಎಸ್‌ಎಫ್‌ಗೆ ರಾಜೀನಾಮೆ ನೀಡಿದ್ದರು. ಬೆಂಗಳೂರಿನ ಮಿನಿಯೇಚರ್‌ ಮಾಡೆಲ್ ಕಂಪನಿಯಲ್ಲಿ 2 ವರ್ಷಗಳವರೆಗೆ ಕೆಲಸ ಮಾಡಿದ್ದರು. ಆದರೆ, ಆ ಕಂಪನಿ ತಮಿಳುನಾಡಿಗೆ ಸ್ಥಳಾಂತರಗೊಂಡಿತು. ಹೀಗಾಗಿ, ತಾವೇ ಸ್ವತಃ ಮಿನಿಯೇಚರ್ ತಯಾರಿಕೆಯಲ್ಲಿ ತೊಡಗಿದರು.

 

- ಎನ್‌. ನವೀನ್‌ಕುಮಾರ್‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು