ಎಲ್.ಎ.ಮಹೇಶ್

ದಾವಣಗೆರೆ | ಸಂಗೀತ

‘ಜನಗಣಮನ’ ಗೀತೆಯನ್ನು ಕನ್ನಡೀಕರಿಸಿ ಹಾಡುವ ಹಳ್ಳಿ ಹಾಡುಹಕ್ಕಿ

 

ಹರಪನಹಳ್ಳಿಯ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕ ಎಲ್.ಎ.ಮಹೇಶ್ ಅಪ್ಪಟ ಗ್ರಾಮೀಣ ಪ್ರತಿಭೆ. ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಹೇಶ್ ಸೋನು ಎಂದೇ ಗುರುತಾಗಿದ್ದಾರೆ.


ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಅಡವಿಮಲ್ಲನಕೇರಿ ತಾಂಡಾದ ಸೋಮಶೇಖರನಾಯ್ಕ ಮತ್ತು ಗಂಗಿಬಾಯಿ ದಂಪತಿಯ ಪುತ್ರ ಮಹೇಶ್.


ಪ್ರಾಥಮಿಕ ಶಿಕ್ಷಣ ಓದುತ್ತಿದ್ದಾಗ ಅಜ್ಜ ಭಾನ್ಯಾನಾಯ್ಕ ಮತ್ತು ತಂದೆ ಸೋಮಶೇಖರ ಹಾಡುತ್ತಿದ್ದ ಜನಪದ ಗೀತೆಗಳನ್ನು ಕೇಳುತ್ತಲೇ ಬೆಳೆದವರು. ಗದಗದ ಬೆಟಗೇರಿಯ ಜಿ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ.ಇಡಿ. ಶಿಕ್ಷಣ ಪಡೆಯಲು ಹೋಗಿದ್ದಾಗ ಗದಗದ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದ ಸಂಪರ್ಕ ಪಡೆದು ಸಂಗೀತ ಅಭ್ಯಾಸ ಮಾಡಿದ್ದಾರೆ. ಅವರನ್ನೇ ಮಾನಸಿಕ ಗುರುವಾಗಿ ಸ್ವೀಕರಿಸಿ, ಪಂಡಿತ ಶ್ರೀಕಾಂತ ಹುಲಿ ಅವರ ಬಳಿ ಈಗಲೂ ಸಂಗೀತ ಕಲಿಯುತ್ತಿದ್ದಾರೆ.


ಬಂಗಾಲಿಯಲ್ಲಿದ್ದ ‘ಜನಗಣಮನ’ ಗೀತೆಯನ್ನು ಕನ್ನಡೀಕರಿಸಿ ಹಾಡಿದ್ದಾರೆ. ವಿವಿಧ ಸಮಾರಂಭ, ಎನ್.ಎಸ್.ಎಸ್.ಶಿಬಿರಗಳಲ್ಲಿ ಸಂಗೀತ ಪ್ರಸ್ತುತ ಪಡಿಸುತ್ತಾರೆ. ಯಾವುದೇ ಗೀತೆ ಕೊಟ್ಟರೂ, ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುವ ಚಾಕಚಕ್ಯತೆ ಇವರದ್ದು.


ರಾಜ್ಯಮಟ್ಟದ ಟಿ.ವಿ.ಶೋಗಳಲ್ಲಿ ಅವಕಾಶ ಸಿಗಲಿಲ್ಲ ಎಂದು ಧೃತಿಗೆಡದೆ ತಾವೇ ‘ಸಿಂಗಿಂಗ್ ಸ್ಟಾರ್ ಆಫ್ ಹರಪನಹಳ್ಳಿ’, ‘ಸಿಂಗಿಂಗ್ ಸ್ಟಾರ್ ಆಫ್ ಬೋಳಂಬಳ್ಳಿ’ ಆಯೋಜಿಸಿ ಅವಕಾಶವಂಚಿತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಸ್ವಂತ ಸ್ಟುಡಿಯೋ ಹೊಂದಿದ್ದಾರೆ. ಈಗ ‘ಚಂದನ’ ವಾಹಿನಿ ನಡೆಸುತ್ತಿರುವ ‘ಗಾನ ಚಂದನ’ದ ಶೋನಲ್ಲಿ ಸ್ಥಾನ ಪಡೆದಿದ್ದಾರೆ.
 

- ವಿಶ್ವನಾಥ ಡಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು