ಕೊಪ್ಪಳ | ಸಮಾಜ ಸೇವೆ
ರೈತಪರ, ಜನಪರ ಮತ್ತು ನಾಡಿನ ಪರ ಹಲವು ಹೋರಾಟಗಳ ನೇತೃತ್ವ ವಹಿಸಿಕೊಂಡಿರುವ ಮಹಾದೇವ ದೇವರು 12 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಲ್ಕು ಮಠಗಳನ್ನು ಜೀರ್ಣೋದ್ಧಾರ ಮಾಡಿರುವ ಅವರು ಎಂಟು ಕೃತಿಗಳನ್ನು ರಚಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರಿನ ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಉಸ್ತುವಾರಿ ವಹಿಸಿಕೊಂಡಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಧುನಿಕ ವಚನಕಾರ, ಲೇಖಕ, ಸಂಪಾದಕ ಮತ್ತು ಪ್ರಕಾಶಕರಾಗಿ ಸಕ್ರಿಯರಾಗಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದಾನ ಮಾಡುವಂತೆ ಯುವಜನರಿಗೆ ಪ್ರೇರೇಪಿಸಿರುವ ‘ರುದ್ರಾಕ್ಷಿ ಧಾರಣೆ’ ಕಾರ್ಯಕ್ರಮದ ಮೂಲಕ ಹೆಚ್ಚು ಜನರನ್ನು ತಲುಪಿದ್ದಾರೆ.
ಜಾನಪದ ಕಲೆಯ ಪೋಷಕರೂ ಆಗಿರುವ ಮಹಾದೇವ ದೇವರು, ಕಲಾವಿದರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಬಯಲಾಟ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಜಾನಪದ ಕಲಾವಿದರಿಗೆ ಮಾಸಾಶನ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾನಪದ ಕಲಾತಂಡ ಕಟ್ಟಿಕೊಂಡು ಸ್ವತಃ ಅದರಲ್ಲಿ ಸಕ್ರಿಯರಾಗಿದ್ದಾರೆ.
ಉಚಿತ ಸಾಮೂಹಿಕ ವಿವಾಹ, ಶೌಚಾಲಯ ನಿರ್ಮಾಣ, ನೇತ್ರದಾನ, ಆರೋಗ್ಯ ತಪಾಸಣೆ ಶಿಬಿರಗಳನ್ನು ನಿರಂತರ ಆಯೋಜಿಸುತ್ತಿದ್ದಾರೆ. ಯುವ ಸಮುದಾಯವನ್ನು ದುಶ್ಚಟಗಳಿಂದ ಮುಕ್ತ ಮಾಡಲು ಅವರು ನಿರಂತರ ಶ್ರಮಿಸುತ್ತಿದ್ದಾರೆ. ಮನೆಮನೆಗೆ ಹೋಗಿ ಶರಣರ, ಸಂತರ ಸಂದೇಶ ನೀಡುವುದು, ದುಶ್ಚಟಗಳಿಂದ
ಆರೋಗ್ಯದ ಮೇಲೆ ಆ ಮೂಲಕ ದೇಶದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಅವರು ಅರಿವು ಮೂಡಿಸುತ್ತಿದ್ದಾರೆ.
-ಗಣೇಶ ಡಿ. ಚಂದನಶಿವ