ಎಲ್‌.ಜಿ. ಮಧುಕುಮಾರ್‌

ದಾವಣಗೆರೆ | ಶಿಕ್ಷಣ

ಸಂಘಟಕನಾಗಿ, ಲೇಖಕನಾಗಿ ಗುರುತಿಸಿಕೊಂಡಿರುವ ಶಿಕ್ಷಕ

 

ಸಾಧನೆಯ ಹಾದಿಯಲ್ಲಿ ದಾಪುಗಾಲು ಇಡುತ್ತಿರುವ ಯುವ ಪ್ರತಿಭೆಯ ಹೆಸರು ಎಲ್‌.ಜಿ.ಮಧುಕುಮಾರ್‌.

 

ಉತ್ತಮ ಸಂಘಟಕನಾಗಿ, ಲೇಖಕನಾಗಿ ಗುರುತಿಸಿಕೊಂಡಿರುವ ಅವರು ಎಂ.ಎ, ಡಿ.ಇಡಿ ಮಾಡಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಕನ್ನಡ ಜಾಗೃತಿ ಬಳಗದ ಸದಸ್ಯರಾಗಿ, ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾಗಿದ್ದಾರೆ. ಹಲವು ಭಾಷಾ ಕಮ್ಮಟ, ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ.


‘ಪರಿಷತ್ತು ನಡೆದು ಬಂದ ಹಾದಿ’, ‘ಕನ್ನಡ ಚಳವಳಿಗೆ ದಾವಣಗೆರೆಯ ಕೊಡುಗೆ’, ‘ಅಡಿಕೆ ಬೆಳೆಗಳ ಸಂಕಷ್ಟ’, ‘ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆ’ ಹೀಗೆ ಕನ್ನಡ ನೆಲ, ಭಾಷೆ, ಸಾಹಿತ್ಯ, ರೈತರ ಸಂಕಷ್ಟಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವುಗಳು ಕೃತಿಯಾಗಿ ಬಿಡುಗಡೆಗೊಳ್ಳಲಿದೆ.

 

ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು ರಾಜ್ಯ ಸರ್ಕಾರ ‘ವಾಟರ್‌ಬೆಲ್‌’ ನಿಯಮ ಜಾರಿಗೆ ತಂದಾಗ ಅದನ್ನು ರಾಜ್ಯದಲ್ಲೇ ಪ್ರಪ್ರಥಮವಾಗಿ ಇದೇ ಶಾಲೆಯಲ್ಲಿ ಅಳವಡಿಸಲು ಮಧುಕುಮಾರ್‌ ಕಾರಣ. ಶಾಲೆಯಲ್ಲಿ ಮಯೂರ ಕನ್ನಡ ಬಳಗ ಮಾಡಿಕೊಂಡು ಮಕ್ಕಳನ್ನು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ. ಮಣ್ಣಿನ ದಿನ, ಜಲ ಸಂರಕ್ಷಣಾ ದಿನ, ಮಣ್ಣು ದಿನ ಹೀಗೆ ಹಲವು ದಿನಗಳನ್ನು ಆಚರಿಸಿ ಮಕ್ಕಳಲ್ಲಿ ಅರಿವು ಮೂಡಿಸಿದ್ದಾರೆ.

 

ವಿಶ್ವಮಾನವ ದಿನಾಚರಣೆಗೆ ಕುಪ್ಪಳಿ ಕವಿಶೈಲದಲ್ಲಿ ಮಕ್ಕಳಿಂದ ಕಾವ್ಯಗಾಯನ, ಸೂರ್ಯಗ್ರಹಣದ ದಿನ ಸೋಲಾರ್‌ ಫಿಲ್ಟರ್‌ ಮೂಲಕ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ.

 

- ಬಾಲಕೃಷ್ಣ ಪಿ.ಎಚ್‌.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು