ಎಂ.ಸುಹಾಸ್‌

ಚಿಕ್ಕನಾಯಕನಹಳ್ಳಿ | ಸಹಜ ಕೃಷಿ

ಸಿರಿಧಾನ್ಯಗಳ ಸರದಾರ ‘ಎಂ.ಸುಹಾಸ್‌’

 

 

ವಿದ್ಯೆ ತಲೆಗೆ ಹತ್ತದಿದ್ದರೂ ಎಸ್ಸೆಸ್ಸೆಲ್ಸಿ, ಪಿಯುಸಿಗೆ ಓದು ಮೊಟಕುಗೊಳಿಸಿ ಬೆಂಗಳೂರೆಂಬೊ ಮಹಾನಗರಗಳಲ್ಲಿ ಉದ್ಯೋಗಕ್ಕಾಗಿ ಬೀದಿ ಅಲೆಯುವವರೆಷ್ಟೋ ಮಂದಿ. ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಯುವಕ ಸಹಜ ಕೃಷಿಯತ್ತ ಮುಖಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ನಾಲ್ಕೈದು ಮಂದಿಗೆ ಉದ್ಯೋಗದಾತರಾಗಿದ್ದಾರೆ.

 

ಚಿಕ್ಕನಾಯಕನಹಳ್ಳಿಯ ಕಂದಿಕೆರೆಯಲ್ಲಿ ಇರುವ ಎರಡು ಎಕರೆಯಲ್ಲಿ ಇಂಚೂ ಜಾಗ ಬಿಡದ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಯುವ ರೈತ ಎಂ.ಸುಹಾಸ್‌. ಆಹಾರ ತಜ್ಞ ಡಾ.ಖಾದರ್‌ ಅವರ ಮಾತಿನಿಂದ ಪ್ರೇರಣೆ ಪಡೆದು ತಮ್ಮ 18ನೇ ವಯಸ್ಸಿನಲ್ಲೇ ಸಿರಿಧಾನ್ಯ ಸಂಸ್ಕರಣೆ ಆರಂಭಿಸಿದ ಅವರು, ಇಂದು ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಿ ‘ಸುಹಾಸ್‌ ಸಿರಿಧಾನ್ಯ’ ಎಂಬ ಬ್ರ್ಯಾಂಡ್‌ ಮೂಲಕ ಮಾರಾಟ ಮಾಡುತ್ತಿದ್ದಾರೆ.

 

ಯಂತ್ರದಿಂದ ಹೊಟ್ಟು ತೆಗೆದು ಸಂಸ್ಕರಿಸಿದರೂ ಕಡೆಯ ಹಂತದಲ್ಲಿ ಮಹಿಳೆಯರಿಂದ ಧಾನ್ಯ ಹಸನು ಮಾಡಿಸುವುದು ಈ ಘಟಕದ ವಿಶೇಷ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಈ ಬ್ರ್ಯಾಂಡ್‌ನ ಸಿರಿಧಾನ್ಯಕ್ಕೆ ಉತ್ತಮ ಹೆಸರೂ ಇದೆ.


ಸುತ್ತಮುತ್ತಲ ರೈತರು ಬೆಳೆದ ಸಿರಿಧಾನ್ಯಗಳನ್ನು ಸಂಸ್ಕರಿಸಿ ಮೌಲ್ಯರ್ಧನೆ ಮಾಡುತ್ತ ಯಶಸ್ಸು ಸಾಧಿಸಿದ್ದಾರೆ ಸುಹಾಸ್‌. ಹಾರಕ, ನವಣೆ, ಊದಲು, ಕೊರಲೆ, ಸಾಮೆ ಈ ಐದು ರೀತಿಯ ಸಿರಿಧಾನ್ಯಗಳನ್ನು ಇಲ್ಲಿ ಸಂಸ್ಕರಿಸಲಾಗುತ್ತಿದ್ದು, ಸಿರಿಧಾನ್ಯ ಬೆಳೆಯಲು ರೈತರಿಗೆ ಉತ್ತೇಜನ ನೀಡುತ್ತಿದ್ದಾರೆ.

 

ಎರಡು ಎಕರೆ ಜಮೀನಿನಲ್ಲಿ 500 ಅಡಿಕೆ ಗಿಡಗಳನ್ನು ನೆಡಲಾಗಿದ್ದು, ರಾಸಾಯನಿಕ ಗೊಬ್ಬರ ಸೋಕದಂತೆ ಗಿಡಗಳನ್ನು ಬೆಳೆಸಿದ್ದಾರೆ. ಅಡಿಕೆ ಮಧ್ಯದಲ್ಲಿ ಬಾಳೆ, ಕರಿಮೆಣಸಿನ ಬಳ್ಳಿ, ವೀಳ್ಯದೆಲೆ ಬಳ್ಳಿ ಸೇರಿದಂತೆ ಸುಮಾರು 20 ಬಗೆಯ ಔಷಧೀಯ ಸಸ್ಯಗಳನ್ನು ಬೆಳೆಸಿ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.

 

–ಸುಮಾ ಬಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು