ಮೈಸೂರು | ಹೆಪ್ಟಥ್ಲಾನ್ ಪಟು
ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡಿರುವ ಎಂ.ಆರ್.ಧನುಷಾ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಕೆ.ಆರ್.ನಗರದ ಅವರು ಮೈಸೂರು ಡಿವೈಇಎಸ್ ಹಾಸ್ಟೆಲ್‌ನಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿದ್ದು, ಬಾಸುದೇವ ಸೊಮಾನಿ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. 20 ವರ್ಷದ ಧನುಷಾ ಹೆಪ್ಟಥ್ಲಾನ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ.
ಈ ಬಾರಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಮೈಸೂರು ವಿ.ವಿ.ಯನ್ನು ಪ್ರತಿನಿಧಿಸಿ ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಇಟಲಿಯ ನೆಪೋಲಿಯಲ್ಲಿ ಜುಲೈನಲ್ಲಿ ನಡೆದಿದ್ದ ವಿಶ್ವ ಅಂತರ ವಿ.ವಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಈ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು
ಪ್ರತಿನಿಧಿಸಿದ್ದ ರಾಜ್ಯದ ನಾಲ್ವರಲ್ಲಿ ಧನುಷಾ ಒಬ್ಬರು. ವಿವಿಧ ದೇಶಗಳ ಸ್ಪರ್ಧಿಗಳ ಜತೆ ಪೈಪೋಟಿ ನಡೆಸಿ 12ನೇ ಸ್ಥಾನ ಪಡೆದುಕೊಂಡಿದ್ದರು.
ಧನುಷಾ ಅವರು ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಪ್ರಸ್ತುತ ಧಾರವಾಡದಲ್ಲಿ ತರಬೇತಿ ನಿರತರಾಗಿದ್ದು, ಆ ಬಳಿಕ ಪಟಿಯಾಲದಲ್ಲಿ ತರಬೇತಿ ಮುಂದುವರಿಸಲಿದ್ದಾರೆ.
ಇವರ ತಂದೆ ಮಂಜು ಅವರು ಕೆ.ಆರ್.ನಗರದಲ್ಲಿ ಆಟೊ ಚಾಲಕರಾಗಿದ್ದಾರೆ. ಆಟೊ ಚಾಲನೆಯಿಂದ ಬಂದ ಹಣದಿಂದ ಕುಟುಂಬ ಹಾಗೂ ಪುತ್ರಿಯ ಕ್ರೀಡಾ ಜೀವನ ನಿಭಾಯಿಸುತ್ತಿದ್ದಾರೆ. ತಾಯಿ ರುಕ್ಮಿಣಿ ಗೃಹಿಣಿ. ಹೆತ್ತವರು ಹಾಗೂ ತರಬೇತುದಾರರು ನೀಡಿದ ಪ್ರೋತ್ಸಾಹದಿಂದ ಧನುಷಾ ಅವರು ಟ್ರ್ಯಾಕ್‌ನಲ್ಲಿ ಎಲ್ಲ ಅಡೆತಡೆಗಳನ್ನು ದಾಟಿ ಮುನ್ನುಗುತ್ತಿದ್ದಾರೆ.
- ಮಹಮ್ಮದ್ ನೂಮಾನ್