ಎಂ.ಪಿ.ವಿನಯ್‌ಕುಮಾರ್

ಮೈಸೂರು‌ | ಯೋಗ ಶಿಕ್ಷಕ

7ನೇ ವಯಸ್ಸಿಗೆ ಯೋಗ ಕಲಿಕೆ, 13ನೇ ವಯಸ್ಸಿಗೆ ಯೋಗ ಶಿಕ್ಷಕ

 

ಬೆಳೆವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಯೋಗಾಭ್ಯಾಸ ಆರಂಭಿಸಿ, 13ನೇ ವಯಸ್ಸಿನಲ್ಲಿಯೇ ಯೋಗ ಶಿಕ್ಷಕರಾಗಿ ಕಾಯಕ ಆರಂಭಿಸಿ 22 ವರ್ಷಗಳಿಂದ ಸಾವಿರಾರು ಜನರಿಗೆ ಯೋಗ ಕಲಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಮೈಸೂರಿನ ಎಂ.ಪಿ.ವಿನಯ್‌ಕುಮಾರ್.

 

7ನೇ ವಯಸ್ಸಿನಲ್ಲಿ ತಾಯಿಯೊಂದಿಗೆ ಯೋಗ ಕಲಿಯಲಾರಂಭಿಸಿದರು. ಬಾಲಕನ ಆಸಕ್ತಿ, ಶ್ರದ್ಧೆ ನೋಡಿದ ಯೋಗ ಗುರು ಟಿ.ಜಲೇಂದ್ರಕುಮಾರ್ ಅವರು, ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎರೆದರು. ಇದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದರು.

 

ಖಾಸಗಿ ಕಂಪನಿ ನೌಕರರಾಗಿದ್ದ ತಂದೆ ಕೆ.ವಿ. ಕೇಶವಪ್ರಕಾಶ್ ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದರು. ಶಿಕ್ಷಕಿಯಾಗಿದ್ದ ತಾಯಿ ಪ್ರೇಮಲತಾ ಅವರು ಪತಿಯ ಆರೈಕೆಗಾಗಿ ಕಡ್ಡಾಯ ನಿವೃತ್ತಿ ಪಡೆದರು. ಇದರಿಂದ ಜೀವನ ಕಷ್ಟವಾಗಿತ್ತು. ಮನೆತನದ ಜವಾಬ್ದಾರಿ ಹೊತ್ತ ವಿನಯ್‌ಕುಮಾರ್‌ಗೆ ಅವರ ಯೋಗ ಗುರುಗಳು ಯೋಗ ತರಗತಿ ಆರಂಭಿಸಲು ಮಾರ್ಗದರ್ಶನ ಹಾಗೂ ಸಹಾಯ ಮಾಡಿದರು. ಆಗ ಯೋಗ ಶಿಕ್ಷಕರಾದ ಇವರು ಹಿಂತಿರುಗಿ ನೋಡಲೇ ಇಲ್ಲ.

 

ಸದ್ಯ ಗೋಕುಲಂನಲ್ಲಿ ‘ಪ್ರಾಣವಶ್ಯ ಯೋಗ’ ಸಂಸ್ಥೆ ನಡೆಸುತ್ತಿದ್ದು, ದೇಶ ವಿದೇಶದಿಂದ ಸಾವಿರಾರು ಆಸಕ್ತರಿಗೆ ಯೋಗ ಕಲಿಸಿದ್ದಾರೆ.

 

ಯೋಗ ದೈಹಿಕವಷ್ಟೇ ಅಲ್ಲ, ಮಾನಸಿಕ ನೆಮ್ಮದಿ, ನೆನಪಿನ ಶಕ್ತಿ, ಬುದ್ಧಿಮತ್ತೆ ಚುರುಕುಗೊಳಿಸುತ್ತದೆ. ಹಲವು ರೋಗ, ಶಾರೀರಿಕ ಸಮಸ್ಯೆ ನಿವಾರಣೆಯಾಗುತ್ತದೆ. ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣವಾಗಿಸಲು ಅಳಿಲು ಸೇವೆ ನನ್ನದು. ನಮ್ಮ ಪರಂಪರೆಯನ್ನು ಅನುಸರಿಸಲು ವಿದೇಶಿಗರು ಭಾರತಕ್ಕೆ ಬರುತ್ತಾರೆ. ನಾವೆಲ್ಲರೂ ಇದರಿಂದ ದೂರ ಹೋಗದಿರೋಣ ಎನ್ನುತ್ತಾರೆ ವಿನಯ್‌ಕಮಾರ್.

 

ಇವರ ಸಾಧನೆ ಕುರಿತು ಲೇಖಕ ಡೆನ್ಮಾರ್ಕ್‌ನ ಮೈಕಲ್‌ ಬೂತ್ ಅವರು ‘EAT PRAY EAT’ ಎಂಬ ಪುಸ್ತಕ ಬರೆದಿದ್ದಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

 

- ಪ್ರದೀಪ ಕುಂದಣಗಾರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು