ಎಲ್‌.ಸಿ. ಆಶಿತ್‌

ಸಾವಯವ ಕೃಷಿ ಪದ್ಧತಿ

ಗುಲಾಬಿ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಆಶಿತ್‌

 

ಸಾಧಕ ರೈತರ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಿಂದ ಸ್ಫೂರ್ತಿ ಪಡೆದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಿದ್ದಾರೆ 33ರ ಹರೆಯದ ರೈತ ಎಲ್‌.ಸಿ.ಆಶಿತ್‌.

 

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಿಂಗನಕೊಪ್ಪಲು ಗ್ರಾಮದ ಆಶಿತ್‌ ಕೃಷಿಯಲ್ಲಿ ತೊಡಗಿಸಿಕೊಂಡು, ತಾವು ಬೆಳೆದ ಉತ್ಪನ್ನಗಳನ್ನು ನೇರ ಮಾರುಕಟ್ಟೆ ವ್ಯವಸ್ಥೆಯಡಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಯಶಸ್ವಿ ರೈತನಾಗಿರುವುದರ ಜೊತೆಗೆ ನೆರೆಹೊರೆಯ ರೈತರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

 

ಇವರು ಅಳವಡಿಸಿಕೊಂಡಿರುವ ಸಮಗ್ರ ಕೃಷಿ ಪದ್ಧತಿ ವೀಕ್ಷಿಸಲು ಕಾಸರಗೋಡು ಸೇರಿದಂತೆ ವಿವಿಧೆಡೆಗಳಿಂದ ಪ್ರತಿನಿತ್ಯ ರೈತರು ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ತಂಡಗಳೂ ಇವರ ತೋಟಕ್ಕೆ ಭೇಟಿ ನೀಡುತ್ತಿವೆ. ತಾವು ಅನುಸರಿಸಿದ ಕೃಷಿ ಪದ್ಧತಿಯ ಬಗ್ಗೆ ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿಯೂ ಮಾಹಿತಿ ಹಂಚಿಕೊಂಡಿದ್ದಾರೆ.

 

ಡಿಪ್ಲೊಮಾ ಪದವೀಧರರಾಗಿರುವ ಆಶಿತ್‌, 13 ಎಕರೆ ಜಮೀನಿನಲ್ಲಿ ಪಪ್ಪಾಯಿ, ಗುಲಾಬಿ, ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಗುಲಾಬಿ ಬೆಳೆಯಲ್ಲಿ ಮಾಸಿಕ ₹1 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಪ್ರತಿನಿತ್ಯ 120 ಕೆ.ಜಿ.ಯವರೆಗೆ ಗುಲಾಬಿ ಬೆಳೆಯುತ್ತಿದ್ದಾರೆ. ಇತರ ಬೆಳೆಗಳು ಸೇರಿದಂತೆ ಮಾಸಿಕ ಆದಾಯ ₹2.5 ಲಕ್ಷ ದಾಟಿದೆ.

 

‘ಬೆಳೆದ ಪದಾರ್ಥಗಳನ್ನು ನೇರವಾಗಿ ಮಾರುಕಟ್ಟೆ ಮಾಡಲು ಆರಂಭಿಸಿದಾಗ ಹೆಚ್ಚು ಆದಾಯ ಶುರುವಾಯಿತು. ಕಡಿಮೆ ಪ್ರದೇಶದಲ್ಲಿ ಬೆಳೆದರೂ, ಮಾರುಕಟ್ಟೆ ವ್ಯವಸ್ಥೆಯೊಂದು ಸಮರ್ಪಕವಾಗಿದ್ದರೆ ರೈತರ ಅರ್ಧ ಸಮಸ್ಯೆ ಬಗೆಹರಿದಂತೆ’ ಎನ್ನುತ್ತಾರೆ ಆಶಿತ್‌.

 

- ಸುನಿಲ್ ಕೆ.ಎಸ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು