ಕೆ.ಪಿ.ಮಧುಸೂದನ್

ತುಮಕೂರು | ಕೃಷಿ

ಮಧುವಿನ ಕೃಷಿಯ ಜಾಡು... 

 

 

ಯುವ ಸಮುದಾಯ ಕೃಷಿ ಬಗ್ಗೆ ತಾತ್ಸಾರ ಧೋರಣೆ ತಾಳುತ್ತಿದೆ ಎನ್ನುವ ಮಾತಿಗೆ ಅಪವಾದ ಕೆ.ಪಿ.ಮಧುಸೂದನ್. ವಿದ್ಯಾರ್ಥಿ ದಿಸೆಯಲ್ಲಿಯೇ ನೈಸರ್ಗಿಕ ಜಲಮೂಲಗಳ ಸಂರಕ್ಷಣೆ, ಕೃಷಿ ಮತ್ತು ಪರಿಸರದ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಮಧು.

 

ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಮಧುಸೂದನ್ ಅವರ ಸ್ವಗ್ರಾಮ. ಆದರೆ ಕಾರ್ಯಕ್ಷೇತ್ರ ತುಮಕೂರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗದ ವೇಳೆಯಲ್ಲಿಯೇ ಸಿಜ್ಞಾ ಯುವ ಸಂವಾದ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಅಲ್ಲಿ ಮಹಿಳೆಯರ ಪರ ಮತ್ತು ಯುವ ಜನರ ಹಕ್ಕುಗಳ ಕುರಿತು ನಡೆಯುತ್ತಿದ್ದ ಅಭಿಯಾನಗಳ ಮುಂದಾಳತ್ವ ವಹಿಸಿದರು.

 

ಶಾಲಾ–ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಭಿಯಾನಗಳನ್ನು ಕಟ್ಟಿದ್ದಾರೆ. ನೆಹರೂ ಯುವ ಕೇಂದ್ರದಲ್ಲಿ ರಾಷ್ಟ್ರೀಯ ಯುವ ಸ್ವಯಂ ಸೇವಕರಾಗಿಯೂ ಕೆಲಸ ಮಾಡಿದ್ದಾರೆ.

 

ಸ್ನಾತಕೋತ್ತರ ಶಿಕ್ಷಣ ಪೂರ್ಣವಾದ ನಂತರ ಮಧುಸೂದನ್ ತೊಡಗಿಸಿಕೊಂಡಿದ್ದು ತುಮಕೂರಿನ ಸಹಜ ಬೇಸಾಯ ಶಾಲೆಯಲ್ಲಿ. ಅಲ್ಲಿನ ಸಂಯೋಜಕ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ರೈತರಿಗೆ ಸಹಜ ಬೇಸಾಯದ ಮಹತ್ವ ತಿಳಿಸುತ್ತಿದ್ದಾರೆ.

 

ಜಿಲ್ಲೆಯ ನೀರಿನ ಬಿಕ್ಕಟ್ಟಿಗೆ ಕಾರಣಗಳು, ಆಯಾಮಗಳನ್ನು ಶೋಧಿಸುವ ಮತ್ತು ಅವುಗಳಿಗೆ ಪರಿಹಾರ ಹುಡುಕುವ ‘ಜಲದ ಜಾಡು’ ಆಂದೋಲನವನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು ಹಳ್ಳಿ ಹಳ್ಳಿಗಳನ್ನು ಮಧು ತಿರುಗಿದ್ದಾರೆ. ಇಷ್ಟೆಲ್ಲಾ ಸಾಮಾಜಿಕ ಮತ್ತು ರೈತಾಪಿ ಅನುಭವಗಳನ್ನು ಜತೆಯಲ್ಲಿ ಇಟ್ಟುಕೊಂಡು ಸ್ವಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ.

 

ಬಣ್ಣ ಬಣ್ಣದ ಕನಸುಗಳನ್ನು ಇಂದಿನ ಯುವ ಸಮುದಾಯ ಬೆನ್ನತ್ತುತ್ತಿದೆ. ಇಂತಹ ಬೆಳವಣಿಗೆಗಳ ನಡುವೆ ಮಧು ವಿಶಿಷ್ಟವಾಗಿ ಗಮನ ಸೆಳೆಯುವರು.

 

-ಡಿ.ಎಂ.ಕುರ್ಕೆ ಪ್ರಶಾಂತ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು