ಕಿರಣ್ ನಂದನ 

ತುಮಕೂರು | ಶೂಟಿಂಗ್

ಸಾಧನೆಯ ಕಡೆಗೆ ಗುರಿಯಿಟ್ಟ ‘ಕಿರಣ’ 

 


ವಿದ್ಯಾರ್ಥಿ ಸೈನಿಕ ದಳ (ಎನ್‌ಸಿಸಿ) ಎಂದರೆ ಹೆಚ್ಚೂ ಕಡಿಮೆ ಮಿಲಿಟರಿ ತರಬೇತಿಯ ಹತ್ತಿರತ್ತಿರ ಎಂದೇ ಹೇಳಬಹುದು. ಕಠಿಣ ದೈಹಿಕ ಕಸರತ್ತು, ಹೆಚ್ಚಿನ ಶ್ರಮ ಬೇಡುವ ಈ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ತೊಡಗಿಸಿಕೊಳ್ಳುವುದು ಕಡಿಮೆ. ಆದರಲ್ಲೂ ಶೂಟಿಂಗ್ ವಿಭಾಗಕ್ಕೆ ಬಂದರೆ ಕೇವಲ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಮಾತ್ರ ಸಾಧನೆ ಮಾಡಿದ್ದಾರೆ. ಕಿರಣ್‌ ನಂದನ ಚಲ ಬಿಡದೆ ಈ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ.

 

ಜಿಲ್ಲಾ ಕೇಂದ್ರಕ್ಕೆ ಕೂಗಳತೆ ದೂರದಲ್ಲಿ ಇರುವ ಮೆಳೇಕೋಟೆಯ ಗಾಯತ್ರಿ, ಸಿದ್ದಪ್ಪಚಾರ್‌ ಮಗಳಾದ ನಂದನ 8ನೇ ತರಗತಿ ಓದುತ್ತಿರುವಾಗಲೆ ಎನ್‌ಸಿಸಿ ಕಡೆ ಆಕರ್ಷಿತರಾದರು. ಇದುವರೆಗೂ ಸುಮಾರು 180 ದಿನಗಳ ಕಾಲ ಎನ್‌ಸಿಸಿ ಕ್ಯಾಂಪ್‌ಗಳನ್ನು ಮಾಡಿದ್ದಾರೆ. ಚಂಡೀಗಡದಲ್ಲಿ ನಡೆದ ಪೀಪ್‌ಸೈಟ್‌ ಶೂಟಿಂಗ್‌ ಸ್ಪರ್ಧೆಯಲ್ಲಿ 546 ಅಂಕಗಳನ್ನು ಗಳಿಸಿ ಕಂಚಿನ ಪದಕ ಗಳಿಸಿದ್ದಾರೆ.

 

ಚೆನ್ನೈನಲ್ಲಿ ನಡೆದ 28ನೇ ಆಲ್‌ ಇಂಡಿಯಾ ಜಿ.ವಿ.ಮಾವಲಾಂಕರ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ತುಮಕೂರಿನ ಮೊದಲ ಮಹಿಳಾ ಸ್ಪರ್ಧಿ ಇವರು. ಇಂಟರ್‌ ಡೈರೆಕ್ಟ್ರೇಟ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕಿರಣ್‌ ನಂದನ ಕರ್ನಾಟಕದ ಮುಖ್ಯಮಂತ್ರಿಗಳ ‘ಚೀಫ್‌ ಮಿನಿಸ್ಟರ್‌ ಕಮಾಡೆಂಟ್‌ ಕಾರ್ಡ್‌’ ಪಡೆದಿರುವುದು ಹೆಗ್ಗಳಿಕೆ.

 

ಈ ಕ್ಷೇತ್ರದ ಬಗ್ಗೆ ಕೇವಲ ಕೇಳಿ ತಿಳಿದಿದ್ದ ನನಗೆ ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. ಸ್ವತಃ ನಾನೇ ಎಲ್ಲವನ್ನು ತಿಳಿದುಕೊಂಡು ಬೆಳೆಯುತ್ತಾ ಹೋದೆ, ಇದಕ್ಕೆ ಅಂತರರಾಷ್ಟ್ರೀಯ ತರಬೇತುದಾರ ಪಾಪಣ್ಣ ಹಾಗೂ ಪ್ರದೀಪ್‌ ಅವರು ನೀರೆರೆದರು ಎನ್ನುತಾರೆ ಕಿರಣ್‌ ನಂದನ.

 

-ಸೋಮಶೇಖರ್ ಎಸ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು