ಕಲಬುರ್ಗಿ | ಸಾಹಿತ್ಯ
23ನೇ ವಯಸ್ಸಿನಲ್ಲೇ ‘ಕಾವ್ಯಮನೆ’ ಎಂಬ ಪುಸ್ತಕ ಪ್ರಕಾಶನ ಆರಂಭಿಸಿರುವ ಕಪಿಲ ಪಿ. ಹುಮನಾಬಾದೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ. ಕತೆ, ಕವಿತೆ ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ‘ಹಾಣಾದಿ’ ಕಾದಂಬರಿಯು ಸಾಹಿತ್ಯ ವಲಯದಲ್ಲಿ ಗಮನ ಸೆಳೆದಿದೆ.
ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್ ಅವರ ‘ನುಡಿ ಬಾಗಿನ’, ಕತೆಗಾರ ಅಮರೇಶ ನುಗಡೋಣಿ ಅವರ ಆತ್ಮಕತೆ ‘ಬುತ್ತಿ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಹಿರಿಯ ಮತ್ತು ಕಿರಿಯ ಬರಹಗಾರರ ಬರಹಗಳಿಗೆ ಪುಸ್ತಕ ರೂಪ ನೀಡಿದ್ದಾರೆ.
ಬೀದರ್ ಜಿಲ್ಲೆಯ ಅಲಿಯಾಬಾದ್‌ನವರಾದ ಕಪಿಲ, ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ. ದಿನದ ಬಹುತೇಕ ಓದು ಮತ್ತು ಬರಹಕ್ಕೆ ಮೀಸಲಿಡುವ ಇವರು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ವಿವಿಧೆಡೆ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಾರೆ.
‘ಪುಸ್ತಕ ಪ್ರಕಾಶನ ಆರಂಭಿಸಿದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದೆ. ಆದರೆ, ದೃತಿಗೆಡಲಿಲ್ಲ. ಹೊಸ ಬರಹಗಾರರಿಗೆ ಅವಕಾಶ ನೀಡುವುದು ಮತ್ತು ಉತ್ತಮ ಕೃತಿಗಳನ್ನು ಓದುಗರಿಗೆ ತಲುಪಿಸುವುದೇ ನನಗೆ ಖುಷಿಯ ವಿಚಾರ. ಹಿರಿಯರ ಮಾರ್ಗದರ್ಶನದಲ್ಲಿ ಸಾಹಿತ್ಯಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಬಯಕೆ ನನ್ನದು’ ಎಂದು ಕಪಿಲ ಹೇಳುತ್ತಾರೆ.
-ಗಣೇಶ ಡಿ. ಚಂದನಶಿವ