ಕೆ.ಎನ್‌.ಶಿವಮ್ಮ

ಕೋಲಾರ | ಕೃಷಿ

ಸಾವಯವ ಕೃಷಿ ಪದ್ಧತಿಯಲ್ಲಿ ಬದುಕು ಕಂಡ ಮಹಿಳೆ

 


ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ದಿಂಬಾಲ ಗ್ರಾಮದ ಕೃಷಿಕ ಮಹಿಳೆ ಕೆ.ಎನ್‌.ಶಿವಮ್ಮ ಸಾವಯವ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆಯುವ ಮೂಲಕ ಕೃಷಿಕ ಸಮುದಾಯದ ಗಮನ ಸೆಳೆದಿದ್ದಾರೆ.

 

ಶಿವಮ್ಮ ಗುಣಿ ಪದ್ಧತಿಯಲ್ಲಿ ಒಂದು ಎಕರೆಗೆ 34 ಕ್ವಿಂಟಲ್‌ ರಾಗಿ ಬೆಳೆದು ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ‘ಉತ್ತಮ ಕೃಷಿಕ ಮಹಿಳೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಂದೂವರೆ ದಶಕದ ಹಿಂದೆ ದಿಂಬಾಲ ಗ್ರಾಮದ ಅವಿಭಕ್ತ ರೈತ ಕುಟುಂಬಕ್ಕೆ ಶಿವಮ್ಮ ಸೊಸೆಯಾಗಿ ಬಂದಾಗ ಸಾಂಪ್ರದಾಯಿಕ ಕೃಷಿ ಚಾಲ್ತಿಯಲ್ಲಿತ್ತು. 25 ಎಕರೆಯಲ್ಲಿ ಮನೆ ಮಂದಿಯೆಲ್ಲಾ ದುಡಿದರೂ ಬೆಳೆ ಇಳುವರಿ ಹೇಳಿಕೊಳ್ಳುವಂತೆ ಇರಲಿಲ್ಲ. ಟೊಮೆಟೊ ಪ್ರಮುಖ ಬೆಳೆಯಾಗಿತ್ತು. ಬೆಲೆ ಏರಿಳಿತದ ನಡುವೆ ಕುಟುಂಬದ ಆರ್ಥಿಕ ಸ್ಥಿತಿ ಕುಂಟುತ್ತಾ ಸಾಗಿತ್ತು.

 

ಕುಟುಂಬದ ಕೃಷಿ ಪದ್ಧತಿ ಅವಲೋಕಿಸಿದ ಶಿವಮ್ಮ ಪತಿ ಡಿ.ಎನ್‌.ರವಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಚರ್ಚಿಸಿ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಲು ಹಾಗೂ ಕೃಷಿ ವೆಚ್ಚ ತಗ್ಗಿಸಲು ನಿರ್ಧರಿಸಿದರು. ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದ ಕುಟುಂಬದಲ್ಲಿ ವೈಜ್ಞಾನಿಕ ಚಿಂತನೆಯ ಗಾಳಿ ಬೀಸತೊಡಗಿತು.

 

ಶಿವಮ್ಮ ಬೆಳೆಗಳಲ್ಲಿ ಕೀಟ ನಿಯಂತ್ರಣಕ್ಕೆ ಬೇವಿನ ಎಣ್ಣೆ ಬಳಸುವ ಮೂಲಕ ದುಬಾರಿ ಬೆಲೆಯ ಕೀಟನಾಶಕಗಳನ್ನು ದೂರವಿಟ್ಟಿದ್ದಾರೆ. ಊಜಿ ನೊಣದ ಹಾವಳಿ ತಡೆಗೆ ಮೋಹಕ ಬಲೆ ಬಳಸಲಾಗುತ್ತಿದೆ. ಬಹುಬೆಳೆ ಪದ್ಧತಿ ಮೂಲಕ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ.

 

-ಜೆ.ಆರ್.ಗಿರೀಶ್‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು