ಜನಾರ್ದನ ಹಾವಂಜೆ

ಉಡುಪಿ | ಕಾವಿ ಕಲೆ

ಕಲಾ ಮಾಧ್ಯಮದ ಮೂಲಕವೇ ಪರಿಸರ ಜಾಗೃತಿ


 

ಕರಾವಳಿಯ ವಿನಾಶದ ಅಂಚಿನಲ್ಲಿರುವ ಕಾವಿ ಕಲೆಗೆ ಮರುಜೀವ ಕೊಡಲು ಶ್ರಮಿಸುತ್ತಿರುವ ಕಲಾವಿದ ಜನಾರ್ದನ ಹಾವಂಜೆ. ಚಿತ್ರಕಲಾ ಮಾಧ್ಯಮದ ಮೂಲಕವೇ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ. ಹಾವಂಜೆ ಅವರ ಚಿತ್ರಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದುಕೊಂಡಿವೆ.
ಮಂಗಳೂರು, ಬೆಂಗಳೂರು, ಜರ್ಮನಿ, ಮುಂಬೈ, ಒಡಿಶಾ, ಮಣಿಪುರ, ದೆಹಲಿ, ತ್ರಿಶೂರ್ ಸೇರಿದಂತೆ ಹಲವು ಖಾಸಗಿ ಸಂಗ್ರಹಗಳಲ್ಲಿ ಅವರ ಕಲಾಕೃತಿಗಳು ಸ್ಥಾನಪಡೆದಿರುವುದು ಅವರೊಳಗಿನ ಕಲಾಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು.

 

ಫೈನ್‌ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜನಾರ್ದನ ಹಾವಂಜೆ ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ, ನಮ್ಮಭೂಮಿ ಕುಂದಾಪುರದ ನಮ್ಮ ನಳಂದಾ ವಿದ್ಯಾಪೀಠದಲ್ಲಿ ಕಾರ್ಯ ಕಲಾ ಶಿಕ್ಷಣದ ಅನುಭವ ಪಡೆದಿದ್ದಾರೆ. 

 

ಏಕ, ದ್ವಿವ್ಯಕ್ತಿ ಪ್ರದರ್ಶನ:‌ ಪುದುಚೇರಿಯ ಮೇಸನ್‌ ಪೆರುಮಾಳ್ ಗ್ಯಾಲರಿಯಲ್ಲಿ ‘ಎಕ್ಸ್‌ಪ್ರೆಷನ್ಸ್‌’ ಹಾಗೂ ಕಲ್ಕತ್ತದ ವಿಎನ್‌ಎಂ ಡೈಮಂಡ್ಸ್‌ ಗ್ಯಾಲರಿಯಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ, ಪ್ರಸಾದ್‌ ಆರ್ಟ್ ಗ್ಯಾಲರಿಯಲ್ಲಿ ‘ಮಾನ್ಸೂನ್ ಎಕ್ಸ್‌ಪ್ರೆಸ್‌’, ಚೆನ್ನೈನ ಕಲಾಪ್ರದರ್ಶನದಲ್ಲಿ ‘ಸಂಕಲ್ಪ’ ದ್ವಿವ್ಯಕ್ತಿ ಪ್ರದರ್ಶನ ನೀಡಿ ಕಲಾಸಕ್ತರಿಂದ ಮೆಚ್ಚುಗೆ ಪಡೆದಿದ್ದಾರೆ.

 

ಸಮೂಹ ಕಲಾಪ್ರದರ್ಶನ: ‘ಶಶಿವರ್ಣ, ಪರಂಪರೆಯ ಹಿನ್ನೋಟ, ದಕ್ಷಿಣ ಭಾರತದ ಸಂಸ್ಕೃತಿ ಉತ್ಸವ, ಮಾನ್ಸೂನ್‌, ನೈನ್ ಸ್ಕ್ವೇರ್ಸ್‌, ಇಂಪ್ರೆಸ್‌ ಅರ್ಥ್‌, ವಿಂಶತಿ, ಇನ್‌ಫ್ರಿನೇಟ್‌, ಭೂಮಿಗೀತ, ವರ್ಣ ಗಣಪ, ರೀ ವಿಸಿಟಿಂಗ್ ದ ಪಾಸ್ಟ್‌ ಹೀಗೆ, ಕರಾವಳಿಯಲ್ಲಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಸಮೂಹ ಕಲಾಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

 

ಕಲಾ ಶಿಬಿರಗಳು: ಮಂಗಳೂರು, ಬೆಂಗಳೂರು, ಕಾರ್ಕಳ, ಮಡಿಕೇರಿ, ಮಲ್ಪೆ, ಸೋಮೇಶ್ವರ ಬೀಚ್‌, ಮೂಡುಬಿದರೆ, ಕೋಟೇಶ್ವರ, ಉಜ್ಜಯಿನಿ, ಭೋಪಾಲ, ಮುಂಬೈ, ಹಿಮಾಚಲ ಪ್ರದೇಶ, ಒಡಿಶಾ ಸೇರಿದಂತೆ 30ಕ್ಕೂ ಹೆಚ್ಚು ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 

 

ಪರಿಸರ ರಕ್ಷಣೆಗೂ ಸೈ: ಬೀಚ್‌ಗಳಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಲು ಸಮುದ್ರದಲ್ಲಿ ಹೆಕ್ಕಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಬಳಸಿ ರಚಿಸಿದ ಗೋಬಿ ಮೀನಿನ ಕಲಾಕೃತಿಯ ಅಂತರರಾಷ್ಟ್ರೀಯ ಮನ್ನಣೆ ಪಡೆದಿತ್ತು. ಈ ಕಲಾಕೃತಿ 14 ರಾಷ್ಟ್ರಗಳಿಗೆ ಪ್ರೇರಣೆಯಾಗಿದ್ದು, ಗಮನ ಸೆಳೆಯುತ್ತಿದೆ.

 

ರಂಗಭೂಮಿ ನಂಟು: ರಂಗಭೂಮಿಯ ಜತೆಗೂ ನಂಟು ಬೆಳೆಸಿಕೊಂಡಿರುವ ಹಾವಂಜೆ, ನಾಟಕ, ಬೀದಿ ನಾಟಕಗಳಿಗೆ ಸುಂದರವಾದ ರಂಗಪರಿಕರ ಸಿದ್ಧಪಡಿಸಿಕೊಡುತ್ತಾರೆ. ರಂಗ ವಿನ್ಯಾಸ, ವಿಶೇಷ ವಿನ್ಯಾಸದ ಸ್ಮರಣಿಕೆಗಳನ್ನು ತಯಾರಿಸುವಲ್ಲಿಯೂ ಸಿದ್ಧಹಸ್ತರು.

 

ಭಾವನ ಪ್ರತಿಷ್ಠಾನ ಸ್ಥಾಪಿಸಿ ಕಲಾಶಿಕ್ಷಣ ನೀಡುತ್ತಿದ್ದಾರೆ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದು, ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.
 

- ಬಾಲಚಂದ್ರ ಎಚ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು