ಜಗದೀಶ ಚಂದ್ರಕಾಂತ ಪಾಟೀಲ

ಕಲಬುರ್ಗಿ | ರಂಗಭೂಮಿ

ಜನ ಮೆಚ್ಚಿದ ಹುಡುಗನ ರಂಗಭೂಮಿ ನಂಟು

 

 

ಕಲಬುರ್ಗಿ ಜಿಲ್ಲೆಯ ಶಹಾಬಾದ್‌ನ ಜಗದೀಶ ಚಂದ್ರಕಾಂತ ಪಾಟೀಲ ಹವ್ಯಾಸಿ ರಂಗ ಕಲಾವಿದ. ಆರು ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳು ಮತ್ತು ಯುವಜನರಿಗೆ ರಂಗ ತರಬೇತಿ ನೀಡುತ್ತಿದ್ದಾರೆ.

 

‌2014ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ರಂಗಪಯಣ ಆರಂಭಿಸಿದ್ದು ನಟರಾಗಿ. ನಂತರದ ಹಂತಗಳಲ್ಲಿ ಇವರು ರಂಗ ತಂತ್ರಜ್ಞ ಮತ್ತು ರಂಗನಿರ್ದೇಶಕರಾಗಿ ರೂಪುಗೊಂಡರು. 

 

ಕಲಬುರ್ಗಿಯ ವಿವಿಧ ಕಲಾ ತಂಡಗಳೊಂದಿಗೆ ಮತ್ತು ರಂಗಕರ್ಮಿಗಳೊಂದಿಗೆ ಗುರುತಿಸಿಕೊಂಡು ರಂಗಭೂಮಿ ಕುರಿತು ಜನಜಾಗೃತಿ ಮೂಡಿಸಿದ್ದಾರೆ. ಬೆಂಗಳೂರು, ಮೈಸೂರು, ತುಮಕೂರು ಮುಂತಾದೆಡೆ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸಮಾಜವನ್ನು ಸುಧಾರಿಸುವ ಮತ್ತು ಪರಿಸರ ಪ್ರಜ್ಞೆ ಬೆಳೆಸುವಲ್ಲಿ ನಾಟಕಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಜನರಿಗೆ ಮನಗಾಣಿಸಿದ್ದಾರೆ.

 

‘ನಾಟಕ ಪ್ರದರ್ಶನದಿಂದ ಕೆಲ ಸಂದರ್ಭಗಳಲ್ಲಿ ಉತ್ತಮ ಆದಾಯ ಬರುವುದಿಲ್ಲ. ಹೆಚ್ಚಿನ ಲಾಭವೂ ಸಿಗುವುದಿಲ್ಲ. ಲಾಭ–ನಷ್ಟದ ವಿಷಯ ಗಂಭೀರವಾಗಿ ಪರಿಗಣಿಸದೇ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವೆ. ಶಹಾಬಾದ್‌ನಲ್ಲಿ ಅಲ್ಲದೇ ಕಲಬುರ್ಗಿಯಲ್ಲಿ ನಿರಂತರವಾಗಿ ನಾಟಕ ಪ್ರದರ್ಶನ ನಡೆದಿವೆ. ರಂಗ ಮುಖೇನ ಜನರನ್ನು ತಲುಪುವುದು ಮತ್ತು ಅವರೊಂದಿಗೆ ಸಂವಾದಿಸುವುದು ನನ್ನ ಮುಖ್ಯ ಉದ್ದೇಶ’ ಎಂದು ಜಗದೀಶ ಹೇಳುತ್ತಾರೆ. 

 

-ರಾಹುಲ ಬೆಳಗಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು