ಇಶಾ ಪಂತ್

ಬೆಂಗಳೂರು | ಐಪಿಎಸ್ ಅಧಿಕಾರಿ

ನೊಂದವರ ಪಾಲಿನ ಬೆಳಕು ಯುವ ಐಪಿಎಸ್ ಅಧಿಕಾರಿ

 

 

ಅಪರಾಧ ಕೃತ್ಯ ಎಸಗುವವರನ್ನು ಕಾನೂನಿನ ಚೌಕಟ್ಟಿನಲ್ಲೇ ಹೆಡೆಮುರಿ ಕಟ್ಟಿ ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಯುವ ಐಪಿಎಸ್ ಅಧಿಕಾರಿ ಇಶಾ ಪಂತ್. ಸದ್ಯ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ. ಡ್ರಗ್ಸ್ ಮಾಫಿಯಾ, ದರೋಡೆ, ಕಳ್ಳತನದಂಥ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿದು ಜೈಲಿಗಟ್ಟುತ್ತಿದ್ದಾರೆ. ಮಹಿಳೆಯರು ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡುವ ವಾತಾವರಣ ನಿರ್ಮಿಸಿದ್ದಾರೆ. 

 

ಭೋಪಾಲ್‌ನ ಬಿಎಚ್‌ಇಎಲ್‌ನಲ್ಲಿ ಎಂಜಿನಿಯರ್ ಬಿ.ಪಿ.ಪಂತ್ ಹಾಗೂ ಹಿಂದಿ ಉಪನ್ಯಾಸಕಿ ಭಾವನಾ ದಂಪತಿಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಇಶಾ ಪಂತ್ ಕೊನೆಯವರು.

 

ಸರ್ಕಾರದ ಶಿಷ್ಯವೇತನದಿಂದಲೇ ಅಮೆರಿಕಕ್ಕೆ ಹೋಗಿ ‘ಅಂತರಾಷ್ಟ್ರೀಯ ಸಂಬಂಧಗಳು’ ವಿಷಯದಲ್ಲಿ ಬಿ.ಎ ಪದವಿ ಪಡೆದಿದ್ದ ಇಶಾ, ಐಎಫ್‌ಎಸ್ ಅಧಿಕಾರಿಯಾಗಿದ್ದ ಅಕ್ಕ ಸ್ಮಿತಾ ಅವರ ಪ್ರೇರಣೆಯಿಂದ 2011ರ ಯುಪಿಎಸ್ಸಿ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಪಡೆದು ಐಪಿಎಸ್ ಹುದ್ದೆಗೆ ಆಯ್ಕೆ ಆದರು. 

 

ಮಧ್ಯಪ್ರದೇಶದ ಜಬಲ್‌ಪುರದ ಹೆಚ್ಚುವರಿ ಎಸ್ಪಿ ಆಗಿ ವೃತ್ತಿ ಆರಂಭಿಸಿದ್ದರು. ಗ್ವಾಲಿಯರ್‌ನಲ್ಲಿ ಹತ್ತು ತಿಂಗಳು ಕೆಲಸ ಮಾಡಿದ್ದರು. 2016ರಲ್ಲಿ ಕಲಬುರ್ಗಿ ಪೊಲೀಸ್ ತರಬೇತಿ ಕಾಲೇಜಿನ ಎಸ್ಪಿ, ತುಮಕೂರಿನ ಎಸ್ಪಿಯಾಗಿಯೂ ಕೆಲಸ ಮಾಡಿದರು. ಇವರ ಪತಿ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್‌ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ.

 

ಮಧ್ಯಪ್ರದೇಶದಲ್ಲಿ ಯುವತಿಯರ ಅಪಹರಣ, ಅತ್ಯಾಚಾರ, ಕೊಲೆ, ದರೋಡೆ, ಡ್ರಗ್ಸ್ ಪ್ರಕರಣಗಳು ಹೆಚ್ಚಾಗಿದ್ದವು. ಸ್ಥಳೀಯ ಶಾಸಕ ಹಾಗೂ ಆತನ ಸಹೋದರರೇ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅವರೆಲ್ಲರನ್ನೂ ಜೈಲಿಗಟ್ಟಿದ್ದ ಇಶಾ ಪಂತ್‌, ಚಿಕ್ಕ ವಯಸ್ಸಿನಲ್ಲೇ ತಮ್ಮ ದಿಟ್ಟ ನಿರ್ಧಾರಗಳ ಮೂಲಕವೇ ಹೆಸರು ಮಾಡುತ್ತಿದ್ದಾರೆ. ಇವರ ವೃತ್ತಿ ಜೀವನ ಆಧರಿಸಿ ಬಾಲಿವುಡ್‌ನಲ್ಲಿ ‘ಜೈ ಗಂಗಾಜಲ್‌’ ಸಿನಿಮಾ ತೆರೆ ಕಂಡಿದೆ. ಇಶಾ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ. 

 

- ಸಂತೋಷ ಜಿಗಳಿಕೊಪ್ಪ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು