ಇಕ್ಬಾಲ್ ಶರುಮುದ್ದಿನ ಪಠಾಣ

ಯಾದಗಿರಿ | ಸಮಾಜ ಸೇವೆ

ಅನಾಥ ಶವಗಳ ‘ದಿಕ್ಕು’ ಈ ಆಟೊ ಚಾಲಕ

 


ಯಾದಗಿರಿ ಜಿಲ್ಲೆಯ ಶಹಾಪುರದವರಾದ ಇಕ್ಬಾಲ್ ಶರುಮುದ್ದಿನ್‌ ಪಠಾಣ ಅವರು ಓದಿದ್ದು ಕಡಿಮೆ. ಸಮಾಜ ಸೇವೆಯಲ್ಲಿ ಸಾಧಿಸಿದ್ದು ಹೆಚ್ಚು.  ದಶಕದಿಂದಲೂ ರಿಕ್ಷಾ ಓಡಿಸಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಈಗ ಶಹಾಪುರ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಡತನದಲ್ಲೇ ಹುಟ್ಟಿ, ಬೆಳೆದ ಅವರಿಗೆ ಈವರೆಗೆ ಸ್ವಂತ ನಿವೇಶನ ಅಥವಾ ಸೂರು ಇಲ್ಲ. ಹಗಲಿರುಳು ದುಡಿದ ಹಣದಲ್ಲೇ ಒಂದಷ್ಟನ್ನು ಅವರು ತಮ್ಮ ಕುಟುಂಬ ನಿರ್ವಹಣೆಗೂ, ಸಮಾಜ ಸೇವೆಗೂ ವಿನಿಯೋಗಿಸುತ್ತಿದ್ದಾರೆ.

 

ಶಹಾಪುರದಲ್ಲಿ ಎಲ್ಲಿಯೇ ರಸ್ತೆ ಅಪಘಾತದ ಸಂದರ್ಭದಲ್ಲಿ ಸಹಾಯಕ್ಕಾಗಿ ಮೊದಲ ಕರೆ ಇಕ್ಬಾಲ್‌ ಅವರಿಗೇ ಬರುತ್ತದಂತೆ. ನಂತರ 108 ಆಂಬುಲೆನ್ಸ್‌ಗೆ. ಅಷ್ಟರಮಟ್ಟಿಗೆ ಆ ಭಾಗದಲ್ಲಿ ಅವರು ಜನನಿತ. ವಾಹನ ಅಪಘಾತವಾದಾಗ ಸಿಲುಕಿದ ಶವಗಳನ್ನು ಹೊರ ತೆಗೆದು ರಕ್ತ ಸಂಬಂಧಿಗಳಿಗೆ ಒಪ್ಪಿಸುವ ಕೆಲಸವನ್ನೂ ಅವರು ಮಾಡಿಕೊಂಡು ಬಂದಿದ್ದಾರೆ. ಎಲ್ಲಿಯೇ ಅನಾಥ, ನಿರ್ಗತಿಕರ ಶವ ಪತ್ತೆಯಾದರೆ ಮೊದಲು ಅಲ್ಲಿಗೆ ತಲುಪುವುದೇ ಇಕ್ಬಾಲ್‌. ಹಲವು ಬಾರಿ ಪೊಲೀಸರೂ ಇವರ ಸಹಾಯ ಪಡೆಯುತ್ತಾರೆ. ಹಾಗಾಗಿ, ಇವರು ಪೊಲೀಸರಿಗೂ ಆಪ್ತ ಮಿತ್ರರಾಗಿದ್ದಾರೆ.

 

ಈ ವರೆಗೆ 150ಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ನೂರಾರು ಮಂದಿಯ ಜೀವ ಉಳಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. 

 

ಇದೆಲ್ಲ ಕೆಲಸ ಮಾಡಲು ನಿಮಗೇನು ಪ್ರೇರಣೆ ಎಂದು ಕೇಳಿದರೆ ತುಂಬ ಮುಗ್ದತೆಯಿಂದ ಅವರು ನೀಡುವ ಉತ್ತರ ‘ಇದೆಲ್ಲ ಅಲ್ಲಾಹುವಿನ ಮೆಹರ್ಬಾನಿ’!
 

-ಗಣೇಶ ಡಿ. ಚಂದನಶಿವ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು