ಬಳ್ಳಾರಿ | ಹಿಂದೂಸ್ತಾನಿ ಗಾಯಕ
ಕಿರಿದಾದ ವಯಸ್ಸಿನಲ್ಲೇ ಹಿರಿದಾದ ಸಾಧನೆ ಮಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಹೆಸರು ಮಾಡಿದ್ದಾರೆ ಯುವ ಗಾಯಕ ಇನ್ಸಾಫ್ ಖಾಜಾ ಹುಸೇನ್.
ಬಾಲ್ಯದಿಂದಲೇ ಗಾಯನ, ನಟನೆ ಮೈಗೂಡಿಸಿಕೊಂಡಿದ್ದ ಇನ್ಸಾಫ್ ಅದನ್ನೇ ಹವ್ಯಾಸ, ವೃತ್ತಿಯಾಗಿ ಮುಂದುವರೆಸಿದ್ದಾರೆ. ಜೂನಿಯರ್, ಸೀನಿಯರ್ ವಿಭಾಗದಲ್ಲಿ ಹಿಂದೂಸ್ತಾನಿ ಸಂಗೀತ ಮುಗಿಸಿರುವ ಅವರು, ನೀನಾಸಂ, ರಂಗಾಯಣದಲ್ಲಿ ಗಾಯಕರಾಗಿ ಕೆಲಸ ಮಾಡಿದ್ದಾರೆ. ‘ಶ್ರೀರಾಮಾಯಣ ದರ್ಶನಂ‘ ಸೇರಿದಂತೆ ಹಲವು ನಾಟಕಗಳಿಗೆ ಕಂಠದಾನ ಮಾಡಿದ್ದಾರೆ.
ದಸರಾ ಉತ್ಸವ, ಯುವ ಜನೋತ್ಸವ, ಬಹುರೂಪಿ ನಾಟಕೋತ್ಸವ, ಸುತ್ತೂರು ಜಾತ್ರೆ ಸೇರಿದಂತೆ ನಾಡಿನ ಹಲವೆಡೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಹಣ, ಚಿತ್ರಕಲೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯ ವೇತನ, ಯುವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲಿ ಹೆಚ್ಚಿನ ಪಾಂಡಿತ್ಯಕ್ಕಾಗಿ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಆಂಧ್ರದ ಗಡಿಯಲ್ಲಿರುವ ಸಿರುಗುಪ್ಪ ತಾಲ್ಲೂಕಿನ ನಾಗರಹಾಳುವಿನಲ್ಲಿ ಜನಿಸಿರುವ ಇನ್ಸಾಫ್, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ನಂತರ ರಂಗಕರ್ಮಿ ಪಿ. ಅಬ್ದುಲ್ಲಾ ಅವರ ಆಶ್ರಯದಲ್ಲಿ ಬೆಳೆದರು. ಮೈಸೂರಿನ ಸುತ್ತೂರು ಮಠದಲ್ಲಿ ಓದುತ್ತಿರುವಾಗಲೇ ಗಾಯನದ ಅಭಿರುಚಿ ಬೆಳೆಸಿಕೊಂಡರು. ಅವರ ಕಂಠಸಿರಿ ಮೆಚ್ಚಿದ ಶಾಲೆಯವರು ಇನ್ಸಾಫ್ ಅವರಿಂದಲೇ ಪ್ರಾರ್ಥನೆ ಮಾಡಿಸಿದರು. ಹಾಡು ಹೇಳಿಸಿದರು. ಬಳಿಕ ಬೇರೆ ಬೇರೆ ಕಡೆ ಹೋಗಿ ಗಾಯನ ಕಾರ್ಯಕ್ರಮ ಕೊಟ್ಟರು.
- ಶಶಿಕಾಂತ್ ಎಸ್. ಶೆಂಬಳ್ಳಿ.