ನಿಶಾ ತಾಳಂಪಳ್ಳಿ

ಬೀದರ್ | ಮಾಡೆಲಿಂಗ್

ಮಿಸ್ ಇಂಡಿಯಾ ಪಟ್ಟಕ್ಕೇರಿದ ಹಳ್ಳಿಯ ಬೆಡಗಿ

 

 

ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿ ಮುಡಿಗೇರಿಸಿಕೊಂಡ ನಿಶಾ ತಾಳಂಪಳ್ಳಿ ಅಪ್ಪಟ ಗ್ರಾಮೀಣ ಪ್ರತಿಭೆ. ಪ್ರಶಸ್ತಿ ಗೆದ್ದ ಬೀದರ್‌ ಜಿಲ್ಲೆಯ ಏಕೈಕ ರೂಪದರ್ಶಿ ಎಂಬ ಹೆಗ್ಗಳಿಕೆ ಇವರದ್ದು. ಊರು ಹುಮನಾಬಾದ್‌ ತಾಲ್ಲೂಕು ಧಮ್ಮನಸೂರು ಗ್ರಾಮ.

 

ಪದವಿ ವರೆಗಿನ ಶಿಕ್ಷಣವನ್ನು ಬೀದರ್‌ ಜಿಲ್ಲೆಯಲ್ಲೇ ಪೂರ್ಣಗೊಳಿಸಿರುವ ಇವರು, ಹೈದರಾಬಾದ್‌ನಲ್ಲಿ ಡಿಪ್ಲೊಮಾ ಇನ್ ಏವಿಯೇಷನ್ ಮಾಡಿದ್ದಾರೆ. ಕೆಲಕಾಲ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

 

ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ 2019ರ ಮೊದಲ ಸುತ್ತಿನ ಸ್ಪರ್ಧೆಗೆ ದೇಶದ 9 ಸಾವಿರ ಸ್ಪರ್ಧಿಗಳು ಅರ್ಜಿ ಸಲ್ಲಿಸಿದ್ದರು. ಆನ್‌ಲೈನ್‌ನಲ್ಲಿ ಆಡಿಯೊ, ವಿಡಿಯೊ ಸಂದರ್ಶನ ಸಹ ಕೊಟ್ಟಿದ್ದರು. ಹೈದರಾಬಾದ್‌ನಲ್ಲಿ ನಡೆದ ನೇರ ಸಂದರ್ಶನದಲ್ಲಿ 600 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ 30 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದ ನಿಶಾ,  ಕರ್ನಾಟಕದ ಏಕೈಕ ಸ್ಪರ್ಧಿ ಆಗಿದ್ದರು. ಇಂಡೊನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ನವೆಂಬರ್ 14 ರಿಂದ 18ರವರೆಗೆ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

 

ಬಾಲ್ಯದಿಂದಲೇ ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ನಿಶಾ, ವಿವಿಧ ಸಂಘ–ಸಂಸ್ಥೆಗಳು ಆಯೋಜಿಸಿದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಯೋಗ ಮತ್ತು ನೃತ್ಯ ಅಭ್ಯಾಸ ಮಾಡಿರುವ ನಿಶಾ ಬೌದ್ಧಿಕ ಕೌಶಲ ವೃದ್ಧಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ.

 

‘ಈ ಪ್ರದೇಶದ ಹೆಣ್ಣುಮಕ್ಕಳಲ್ಲಿ ಹಿಂಜರಿಕೆ ಹೆಚ್ಚು. ಅದನ್ನು ಹೋಗಲಾಡಿಸುವುದು ನನ್ನ ಮೊದಲ ಕೆಲಸ. ನಿಸಿಮಾ ಕ್ಷೇತ್ರದಲ್ಲೂ ಸಾಧನೆ ಮಾಡುವ ಆಸೆ ಇದೆ’ ಎನ್ನುತ್ತಾರೆ ನಿಶಾ. 

 

-ಸತೀಶ ಬಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು