ಹರೀಶ್‌ರಾವ್‌ ಎಸ್‌

ದಾವಣಗೆರೆ | ಶಿಲ್ಪಿ

ಶಿಲ್ಪಕಲೆಯಲ್ಲಿ ನಾವೀನ್ಯ ಬಿಂಬಿಸುವ ಶಿಲ್ಪಿ


ಮನೆಯ ಬಳಿ ಹಿರಿಯರೊಬ್ಬರು ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದುದನ್ನು ತದೇಕಚಿತ್ತದಿಂದ ನೋಡುತ್ತಿದ್ದ ಬಾಲಕನಿಗೆ ತಾನೂ ಈ ರೀತಿಯ ಸುಂದರ ಮೂರ್ತಿಗಳನ್ನು ತಯಾರಿಸಬೇಕೆಂಬ ಹಂಬಲ.


ಆ ಹಂಬಲ ಅವರ ಹೆಸರನ್ನು ಇಂದು ಶಿಲ್ಪಕಲಾ ವಿಭಾಗದಲ್ಲಿ ಜನರು ಗುರುತಿಸುವಂತೆ ಮಾಡಿದೆ. ಮನೆಯವರು ಬೇಡ ಎಂದರೂ ಬಿಡದೆ ಗಣೇಶನನ್ನು ತಯಾರಿಸಿ ಮನೆಯ ಬಳಿಯ ಖಾಲಿ ಜಾಗದಲ್ಲಿ ಪ್ರತಿಷ್ಠಾಪಿಸಿದ ಗಣೇಶನಿಗೆ ನೆರೆಹೊರೆಯವರು ಪೂಜೆ ಸಲ್ಲಿಸಿ ಗಣೇಶ ಹಬ್ಬ ಆಚರಿಸಿದಾಗ ಏನೂ ಸಾಧಿಸಿದ ಪುಳಕ.


ಆ ಸಂಭ್ರಮವೇ ಬಾಲಕನಲ್ಲಿ ಕಲಾವಿದನಾಗುವ ಬಯಕೆ ಬೇರೂರುವಂತೆ ಮಾಡಿತ್ತು. ಗಣೇಶ ಮೂರ್ತಿ ತಯಾರಿಕೆ ಚಿತ್ರಕಲೆಯತ್ತ ಒಲವು ಮೂಡಿಸಿದರೆ ದೃಶ್ಯ ಕಲಾ ಮಹಾವಿದ್ಯಾಲಯ ಸೇರುವ ಹೊತ್ತಿಗೆ ಮನಸ್ಸು ಶಿಲ್ಪಕಲೆಯತ್ತ ಹೊರಳಿತ್ತು. ಏನಾದರೂ ಹೊಸತನ್ನು ಮಾಡಬೇಕೆಂಬ ಉತ್ಸಾಹ ಹರೀಶರಾವ್‌ ಎಸ್‌. ಅವರನ್ನು ಇಂದು ಶಿಲ್ಪಕಲೆ ಕಲಾವಿದನಾಗಿ ಗುರುತಿಸುವಂತೆ ಮಾಡಿದೆ. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ 6 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.


ಹುಟ್ಟಿದ್ದು ಶಿವಮೊಗ್ಗದ ಹೊಸ್ಮನೆಯಲ್ಲಿ ಬದುಕು ಕಂಡುಕೊಂಡದ್ದು ಬೆಣ್ಣೆದೋಸೆ ನಗರಿಯಲ್ಲಿ. ಅಪ್ಪ ದಿ. ಸುಧಾಮ್‌ರಾವ್‌. ಅಮ್ಮ ಮಂಜುಳಾ. ಬಾಲ್ಯ ಕಳೆದದ್ದು, ಓದಿದ್ದು ಬಿ.ಆರ್‌. ಪ್ರಾಜೆಕ್ಟ್‌ನಲ್ಲಿ. ಬಳಿಕ ಕಲೆಯ ಆಸಕ್ತಿ ಕರೆತಂದದ್ದು ದಾವಣಗೆರೆಯಲ್ಲಿ.


ಇದುವರೆಗೆ 70ಕ್ಕೂ ಹೆಚ್ಚು ಶಿಲ್ಷಕಲಾ ಕೃತಿಗಳನ್ನು ರಚಿಸಿರುವ ಅವರು, ಮಿಕ್ಸ್ ಮಿಡಿಯಾದಲ್ಲಿ ಸಿದ್ಧಹಸ್ತರು. ಸಿಮೆಂಟ್, ಪೈಬರ್‌, ಕಂಚು ಸೇರಿ ಎಲ್ಲ ಪ್ರಕಾರಗಳಲ್ಲೂ ಶಿಲ್ಪಕಲೆ ರಚಿಸುವ ಅವರು, ಕನ್ನಡದ ‘ಗೌರಿಪುತ್ರ’  ಹಾಗೂ ‘ಡಂಗುರ’ ಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಪ್ರತಿಭೆ ಅರಸಿ ಹಲವು ಪ್ರಶಸ್ತಿಗಳು ಬಂದಿವೆ. 


ಮೈಸೂರು ದಶರಾ ಪ್ರಶಸ್ತಿ, ದಾವಣಗೆರೆ ವಿಶ್ವವಿದ್ಯಾಲಯದ ‘ಬೆಸ್ಟ್‌ ವರ್ಕರ್‌’, ತುಮಕೂರು ಆರ್ಟ್‌ ಸೊಸೈಟಿಯ ಪ್ರಶಸ್ತಿ, ಚಿತ್ರಸಂತೆ, ಚಿತ್ರೋತ್ಸವಗಳಲ್ಲಿ ಕೃತಿಗಳಿಗೆ ಪ್ರಥಮ ಬಹುಮಾನ, ಅಲ್ಲದೇ ಹಲವು ರಾಜ್ಯ, ರಾಷ್ಟ್ರಮಟ್ಟದ ಶಿಬಿರಗಳ ಜ್ಯೂರಿಯಾಗಿಯೂ ಕೆಲಸ ಮಾಡಿದ್ದಾರೆ.


ಭಾವಶಿಲ್ಪ ಖುಷಿ ಕೊಡುವ ಕಲಾ ಪ್ರಕಾರ ಎನ್ನುವ ಅವರು ಗಾಂಧೀಜಿ, ಸ್ವಾಮಿ ವಿವೇಕಾನಂದ, ಅಬ‌್ದುಲ್‌ ಕಲಾಂ, ಡಾ. ರಾಜ್‌ಕುಮಾರ್‌ ಅವರ ಪ್ರತಿಮೆ ರಚಿಸಿದ್ದಾರೆ. 


ಒಂದೇ ಸೂರಿನಡಿ ದೇಶದ ಸಮಗ್ರ ಇತಿಹಾಸವನ್ನು ಪರಿಚಯಿಸುವ ಅದ್ಭುತ ‘ರಾಕ್‌ ಗಾರ್ಡನ್‌’ ನಿರ್ಮಿಸಬೇಕು. ನಮ್ಮ, ಕಲೆ, ಸಂಸ್ಕೃತಿ, ಸಾಹಿತ್ಯದ ಪರಿಚಯ ಅಲ್ಲಿ ಸಿಗಬೇಕು ಎನ್ನುವ ಕನಸು ಹೊತ್ತಿರುವ ಅವರು ವಿದ್ಯಾರ್ಥಿಗಳೂ ಶಿಲ್ಪಕಲೆಯಲ್ಲಿ ಪ್ರಶಸ್ತಿ ಪಡೆಯುವಂತೆ ತಯಾರು ಮಾಡಿದ್ದಾರೆ.

 

- ಚಂದ್ರಶೇಖರ ಆರ್‌.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು