ಎಚ್‌.ಎಲ್‌. ಓಂಶಿವಪ್ರಕಾಶ್‌

ಬೆಂಗಳೂರು | ತಂತ್ರಜ್ಞಾನ

ಜಗದಗಲಕೆ ಕನ್ನಡದ ಕಂಪು

 

 

ಮೂಲತಃ ಬೆಂಗಳೂರಿನವರೇ ಆದ ಎಚ್‌.ಎಲ್‌. ಓಂಶಿವಪ್ರಕಾಶ್‌ ಎಂಬಿಎ ಪದವೀಧರ. ಕಾರ್ಮಾಟೆಕ್‌ ಸಾಫ್ಟ್‌ವೇರ್ ಕಂಪನಿಯಲ್ಲಿ ತಂತ್ರಜ್ಞಾನ ಮತ್ತು ವ್ಯಾವಹಾರಿಕ ಅಭಿವೃದ್ಧಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ. ಕಳೆದ 17 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಕನಾಗಿ, ತಂತ್ರಜ್ಞನಾಗಿ ಸೇವೆ.

 

ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನಾ ಮತ್ತು ಅಧ್ಯಯನ ವೇದಿಕೆ ‘ಸಂಚಯ’ದ ಸೃಷ್ಟಿಕರ್ತರಲ್ಲಿ ಇವರೂ ಒಬ್ಬರು. ಅದು ಮಾಡಿದ ಕೆಲಸ ಕನ್ನಡ ಸಾರಸ್ವತ ಲೋಕದ ಅದ್ಭುತ. ವಚನ ಸಂಚಯ (https://vachana.sanchaya.net), ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಸಂಚಯ, ಜನ್ನ ಸಂಚಯ, ಪದ ಸಂಚಯಗಳು ಜಗದಗಲ ಬೆರಳ ತುದಿಯಲ್ಲೇ ಈ ಮಹಾನ್‌ ಸಾಹಿತ್ಯ ಕೃತಿಗಳು ಓದುಗರಿಗೆ ಸುಲಭದಲ್ಲಿ ಲಭ್ಯವಾಗುವಂತೆ ಮಾಡಿವೆ. ಇವರ ‘ಸಂಚಿ ಫೌಂಡೇಶನ್‌’ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ, ಶ್ರಾವ್ಯ ಮಾಧ್ಯಮಗಳ ಮೂಲಕ ದಾಖಲೀಕರಣದಲ್ಲಿ ತೊಡಗಿದೆ.

 

2006ರಲ್ಲಿ ಆರಂಭಿಸಲಾಧ ‘ಲಿನಕ್ಸಾಯಣ.ನೆಟ್‌’ ಮುಕ್ತ ತಂತ್ರಾಂಶವನ್ನು ಕನ್ನಡಿಗರಿಗೆ ತಲುಪಿಸುತ್ತಿರುವ ಬ್ಲಾಗ್‌, ಮಾಹಿತಿ ತಂತ್ರಜ್ಞಾನದ ಅನೇಕ ಬೆಳವಣಿಗೆಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದೆ. ಮಕ್ಕಳಿಗಾಗಿ ‘ಕಿಂದರಿ ಜೋಗಿ.ಕಾಂ’, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳನ್ನು ಬರೆಯಲು ಪ್ರೇರೇಪಿಸುವ ಕನ್ನಡದ ಮೊದಲ ಇ–ಪುಸ್ತಕ ‘ಅರಿವಿನ ಅಲೆಗಳು’, ಕನ್ನಡ ಮತ್ತು ಇಂಗ್ಲಿಷ್‌ ವಿಕಿಪೀಡಿಯಾ ಸಮುದಾಯಗಳು, ಮೋಜಿಲ್ಲಾ ಫೌಂಡೇಶನ್‌, ಕನ್ನಡ ಲೋಕಲೈಸೇಷನ್‌ಗಳಂತಹ ಹಲವಾರು ತಂತ್ರಜ್ಞಾನ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

 

ಇದೆಲ್ಲದರ ಜತೆಗೆ ಕಾಪಿರೈಟ್‌ ಹೊರತಾದ 11 ಭಾಷೆಗಳ 1,500ಕ್ಕೂ ಅಧಿಕ ಪುಸ್ತಕಗಳನ್ನು ಡಿಜಿಟೈಸ್‌ ಮಾಡಿದ್ದಾರೆ. ಅವುಗಳಲ್ಲಿ ಕನ್ನಡ ಪುಸ್ತಕಗಳ ಸಂಖ್ಯೆ 700 ದಾಟಿವೆ. ತಂತ್ರಜ್ಞಾನವನ್ನು ಕನ್ನಡದ ಬೆಳವಣಿಗೆಗೆ ಬಳಸಿಕೊಂಡ ಒಬ್ಬ ಅಪರೂಪದ ಸಾಧಕ.

 

- ಬಾಲಕೃಷ್ಣ ಎಂ.ಜಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು