ಡಾ.ರಣಜಿತ್ ಬೀರಣ್ಣ ನಾಯಕ

ಕಾರವಾರ | ವೈದ್ಯಕೀಯ ಸಾಹಿತ್ಯ

ಹೃದಯಕ್ಕೆ ಸಾಹಿತ್ಯದ ಚಿಕಿತ್ಸೆ ನೀಡುವ ವೈದ್ಯ

 


ಇವರು ದಿನದ ಬಹುಪಾಲು ಸಮಯವನ್ನು ಶಸ್ತ್ರಚಿಕಿತ್ಸಾ ಕೊಠಡಿಯಲ್ಲೇ ಕಳೆಯುತ್ತಾರೆ. ಸದಾ ಸ್ಟೆತಾಸ್ಕೋಪ್‌ ಅನ್ನು ಹೆಗಲಿಗೇರಿಸಿ, ‘ವೈದ್ಯಕೀಯ ಭಾಷೆ’ಯಲ್ಲೇ ಹೆಚ್ಚು ಮಾತನಾಡುತ್ತಾರೆ. ಆದರೆ, ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ರಚಿಸಿ ಜನಸಾಮಾನ್ಯರಿಗೂ ತಲುಪಿಸುತ್ತಿದ್ದಾರೆ!

 

ನಗರದ ಬ್ರಾಹ್ಮಣ ಗಲ್ಲಿಯ ನಿವಾಸಿ, 28ರ ಹರೆಯದ ಡಾ.ರಣಜಿತ್ ಬೀರಣ್ಣ ನಾಯಕ, ‘ಪ್ರಜಾವಾಣಿ’ ಗುರುತಿಸಿದ ಯುವ ಸಾಧಕರಲ್ಲಿ ಒಬ್ಬರು.

 

ಅಂಕಣ ಬರಹಗಳ ಸಂಗ್ರಹ ‘ವೈದ್ಯ ವಿಜ್ಞಾನ’ ಹಾಗೂ ‘ವೈದ್ಯ ದರ್ಪಣ’ ಕೃತಿಗಳು ಬಿಡುಗಡೆಯಾಗಿವೆ. ಈ ಪೈಕಿ ‘ವೈದ್ಯ ವಿಜ್ಞಾನ’ವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2018ನೇ ಸಾಲಿನ ‘ಶ್ರೇಷ್ಠ ಪುಸ್ತಕ’ ಎಂದು ಗೌರವಿಸಿದೆ. 

 

ಪ್ರಸ್ತುತ ಜೈಪುರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಬಗ್ಗೆ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ದಾವಣಗೆರೆಯ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡಿದ್ದರು.

 

‘ದಾವಣಗೆರೆಯ ಮಂಡಕ್ಕಿ ಕಾರ್ಖಾನೆಗಳಿಂದ ಸ್ಥಳೀಯರ ಉಸಿರಾಟದ ಮೇಲೆ ಆಗುತ್ತಿರುವ ಪರಿಣಾಮ’ ಹಾಗೂ ‘ಸಲಿಂಗ ಕಾಮಿಗಳಲ್ಲಿ ಹಿಂಸಾ ಪ್ರಮಾಣ’ ಎಂಬ ಅಧ್ಯಯನ ವರದಿಗಳನ್ನು ಸಿದ್ಧಪಡಿಸಿದ್ದರು. ಅವುಗಳನ್ನು ಮೆಚ್ಚಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಅವರಿಗೆ ಅಲ್ಪಾವಧಿ ವಿದ್ಯಾರ್ಥಿವೇತನ ನೀಡಿತ್ತು.

 

ದಾವಣಗೆರೆಯ ಹಿಮೋಫೀಲಿಯಾ ಸೊಸೈಟಿಯಲ್ಲಿ ಸ್ವಯಂಸೇವಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ರಣಜಿತ್ ಪರಿಸರದ ಬಗ್ಗೆಯೂ ಅತೀವ ಕಾಳಜಿ ಹೊಂದಿದ್ದಾರೆ. ಕುಮಟಾ ತಾಲ್ಲೂಕಿನ ತಡದಿಯಲ್ಲಿ ಹಾಗೂ ಕಾರವಾರ ತಾಲ್ಲೂಕಿನ ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಯ ವಿರುದ್ಧ ಜನಜಾಗೃತಿ ಮೂಡಿಸಿದ್ದಾರೆ.
 

- ಸದಾಶಿವ ಎಂ.ಎಸ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು