ಮೈಸೂರು | ಸಾಹಿತ್ಯ
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿರುವ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ ಸಂಶೋಧಕರಾಗಿರುವ ಡಾ.ಕುಪ್ನಳ್ಳಿ ಎಂ.ಬೈರಪ್ಪ ಅವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ವಿದ್ವಾಂಸ.
ಅವರು ಶಾಸ್ತ್ರೀಯ ಭಾಷೆಗೆ ಸಲ್ಲಿಸಿದ ಸೇವೆಗಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ‘ರಾಷ್ಟ್ರಪತಿ ಪುರಸ್ಕಾರ’ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ 2019ನೇ ಸಾಲಿನ ‘ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ 33ರ ಹರೆಯದ ಬೈರಪ್ಪ ಕಿರಿಯ ವಯಸ್ಸಿನವರು. ಈ ಪ್ರಶಸ್ತಿಯ ಮೊತ್ತ ₹1 ಲಕ್ಷ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿಯವರಾದ ಬೈರಪ್ಪ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರ‍್ಯಾಂಕ್‌ನೊಂದಿಗೆ ಎಂ.ಎ ಪದವಿ ಪಡೆದಿದ್ದಾರೆ. ಹಿರಿಯ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರು ಅವರ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ’ ವಿಷಯದಲ್ಲಿ ಪಿ.ಎಚ್‌ಡಿ ಪಡೆದಿದ್ದಾರೆ.
ಕರ್ಣರಸಾಯನ, ಅಂತರಗಂಗವ್ವ, ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ, ಬಸವ ಸಿನಿಮಾ ಬುದ್ಧ ಪ್ರತಿಮಾ, ಬೌದ್ಧಯಾನಿ ಚಾಮುಂಡಿ, ಕತ್ತಲನಾಡಿನ ಬೆಳಕಿನ ಹಾಡು, ಬುದ್ಧನಗೆಯ ತಾಯಿ ನದಿ, ಬೋಧಿಯಾನ ಸೇರಿದಂತೆ 20ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಕೃತಿಗೆ ಲಭಿಸಿದ ₹10 ಸಾವಿರವನ್ನು ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೀಡಿದ್ದಾರೆ. ಪ್ರೊ.ಹಾ.ಮಾ.ನಾಯಕ ದತ್ತಿ ಬಹುಮಾನ, ಲೋಹಿಯಾ ಸಮತಾ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ದೊರೆತಿವೆ.
- ಎನ್. ನವೀನ್ ಕುಮಾರ್