ಡಾ.ಎಚ್.ಮಂಜುನಾಥ್

ತುಮಕೂರು | ಸಹಜ ಬೇಸಾಯ

ರೈತರಿಗೆ ಸಹಜ ಬೇಸಾಯದ ಮಾರ್ಗದರ್ಶಿ

 

 

ಜಿಲ್ಲೆಯ ಬಹುತೇಕ ರೈತರಿಗೆ ಡಾ.ಎಚ್.ಮಂಜುನಾಥ್ ಹೆಸರು ಅಪರಿಚಿತ. ಅದೇ ಸಹಜ ಬೇಸಾಯ ಶಾಲೆಯ ಮಂಜುನಾಥ್ ಎಂದರೆ ಚಿರಪರಿಚಿತ.

 

ಕುಣಿಗಲ್ ತಾಲ್ಲೂಕಿನ ರಾಜಗೆರೆ ಮಂಜುನಾಥ್ ಸ್ವಗ್ರಾಮ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿ ಪಡೆದ ಮಂಜುನಾಥ್ ನಂತರ ತೊಡಗಿದ್ದು ಸಹಜ ಬೇಸಾಯ ಕ್ಷೇತ್ರದಲ್ಲಿ.

 

‘ಸಹಜ ಬೇಸಾಯ ಶಾಲೆ’ ಮೂಲಕ ರಾಜ್ಯದಲ್ಲಿ 100ಕ್ಕೂ ಹೆಚ್ಚು ರೈತರನ್ನು ಸಹಜ ಬೇಸಾಯಕ್ಕೆ ಒಗ್ಗಿಸಿದ್ದಾರೆ. ಜಿಲ್ಲೆಯಲ್ಲಿಯೇ 50ಕ್ಕೂ ಹೆಚ್ಚು ರೈತರು ಶಾಲೆಯ ಮಾರ್ಗದರ್ಶನ ಪಡೆಯುತ್ತಿದ್ದಾರೆ.

 

ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳ ಅತಿಯಾದ ಬಳಕೆಯ ದುಷ್ಪರಿಣಾಮಗಳನ್ನು ರೈತರ ಮನಸ್ಸುಗಳಿಗೆ ಆಳವಾಗಿ ನಾಟಿಸುತ್ತಿದ್ದಾರೆ. ಆ ಮೂಲಕ ಸಹಜ ಬೇಸಾಯದ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಹೀಗೆ ಮಂಜುನಾಥ್ ಮಾರ್ಗದರ್ಶನದಲ್ಲಿ ಸಹಜ ಬೇಸಾಯದಲ್ಲಿ ತೊಡಗಿರುವ ರೈತರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಆದರ್ಶ ರೈತರಾಗಿ ಹೊರಹುಮ್ಮಿದ್ದಾರೆ.

 

ಮಂಜುನಾಥ್ ಅವರಿಗೆ, ಮಂಡ್ಯ ಕರ್ನಾಟಕ ಸಂಘವು 2019ರಲ್ಲಿ ವೈ.ಕೆ.ರಾಮಯ್ಯ ಸಹಜ ಕೃಷಿ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜೀವ್ ಗಾಂಧಿ ಪ್ರಶಸ್ತಿ, ಪ್ರಿಯದರ್ಶಿನಿ ಇಂದಿರಾಗಾಂಧಿ ಪ್ರಶಸ್ತಿ, ‘ಕರ್ನಾಟಕ ರಾಜ್ಯಶ್ರೀ’ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.  

 

ಮಂಜುನಾಥ್ ಮೂರು ವರ್ಷಗಳಿಂದ ತುಮಕೂರು ಜಿಲ್ಲೆಯನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕೆಲಸ ಮಾಡಿದ್ದಾರೆ.

 

‘ಫುಕುವೋಕ ಅವರು ಹೇಳಿದ ಸಹಜ ಬೇಸಾಯದ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಕೃಷಿ ಪ್ರಕೃತಿಯ ಅವಿಭಾಜ್ಯ ಅಂಗ. ಕಾಡು ಬೆಳೆಸುವುದು, ತೋಟಗಾರಿಕೆ, ಹೈನುಗಾರಿಕೆಯೂ ಇದರ ಉ‍ಪ ಅಂಗಗಳು. ದುಡಿಮೆ ಅಂದರೆ ಹಣ ಸಂಪಾದನೆ ಮಾತ್ರವಲ್ಲ. ಆರೋಗ್ಯ ಸಂಪಾದನೆಯೂ ಆಗಿದೆ’ ಎನ್ನುತ್ತಾರೆ ಮಂಜುನಾಥ್.

 

-ಡಿ.ಎಂ.ಕುರ್ಕೆ ಪ್ರಶಾಂತ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು