ದಿಯಾ ಎಸ್‌. ಅರಸ್‌

ಮೈಸೂರು | ಕರಾಟೆ, ಕಿಕ್‌ ಬಾಕ್ಸಿಂಗ್‌

ಅಂತರರಾಷ್ಟ್ರೀಯ ಕರಾಟೆಪಟು, ಕಿಕ್‌ಬಾಕ್ಸಿಂಗ್‌ಗೂ ಸೈ

 

ಮೈಸೂರಿನ ಸರಸ್ವತಿಪುರಂ ನಿವಾಸಿಗಳಾದ ಬಿ.ಎಸ್.ಶ್ರೀನಾಥ್ ಅರಸ್ ಹಾಗೂ ರೂಪಾ ಎಸ್. ದಂಪತಿ ಪುತ್ರಿಯಾದ ದಿಯಾ ಎಸ್‌. ಅರಸ್‌ ಕರಾಟೆ, ಕಿಕ್‌ ಬಾಕ್ಸಿಂಗ್‌ನಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

 

ದೇಶದಲ್ಲೇ ಹಣೆಯಿಂದ 1 ನಿಮಿಷದಲ್ಲಿ 31 ಮಂಗಳೂರು ಹೆಂಚುಗಳನ್ನು ಒಡೆದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಷ್ಯಾದಲ್ಲಿ 2016ರಲ್ಲಿ ನಡೆದಿದ್ದ ವಾಕೊ ವರ್ಲ್ಡ್‌ ಜೂನಿಯರ್ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 15–16 ವರ್ಷದೊಳಗಿನ ಕೆ–1 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದಿರುವ ಕರ್ನಾಟಕದ ಪ್ರಥಮ ಬಾಲಕಿಯಾಗಿದ್ದಾರೆ.

 

ಇಂಡೋನೇಷ್ಯಾ ದೇಶದ ಜಕಾರ್ತ ನಗರದಲ್ಲಿ 2018ರ ನವೆಂಬರ್‌ನಲ್ಲಿ 15ನೇ ಏಷ್ಯಾ ಪೆಸಿಫಿಕ್ ಶಿಟೊ ರಿಯು ಕರಾಟೆ ಡೊ ಚಾಂಪಿಯನ್‌ಷಿಪ್‌ನಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಹಿರಿಯರ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕರ್ನಾಟಕ ರಾಜ್ಯದ 21 ವರ್ಷದೊಳಗಿನ ಮತ್ತು ಹಿರಿಯರ ಮಹಿಳೆಯರ ಕಟಾ ವಿಭಾಗದಲ್ಲಿ ಸತತವಾಗಿ 3 ಬಾರಿ ಚಿನ್ನದ ಪದಕ ಪಡೆದಿದ್ದಾರೆ. 2017, 2018 ಮತ್ತು 2019ರ ಕರ್ನಾಟಕ ರಾಜ್ಯ ಕಟಾ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

 

ಜಯಲಕ್ಷ್ಮೀಪುರಂನ ವಿದ್ಯಾಶ್ರಮ ಕಾಲೇಜಿನಲ್ಲಿ ಪ್ರಥಮ ಬಿಎ ಓದುತ್ತಿರುವ ದಿಯಾ, ನೃತ್ಯ, ಗೈಡಿಂಗ್, ಸೈಕ್ಲಿಂಗ್, ಸಂಗೀತ, ಚಿತ್ರಕಲೆ, ಚಾರಣ ಹಾಗೂ ಕೃತಕ ಗೋಡೆ ಹತ್ತುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ.

 

- ಎನ್‌. ನವೀನ್‌ಕುಮಾರ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು