ದೇವುಕುಮಾರ ಸಾತಳಗಾಂವ

ಕಲಬುರ್ಗಿ | ಕಾಮಿಡಿ ಕಲಾವಿದ

ದೇಸಿ ಸೊಗಡಿನ ಹಾಸ್ಯ ಕಲಾವಿದ

 

 

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕುಡಿಯೂರು ಗ್ರಾಮದ ದೇವುಕುಮಾರ ಸಾತಳಗಾಂವ ಬಡತನದಲ್ಲೇ ಬೆಂದು ಬೆಳೆದವರು. ಜೀವನ ಸಂಕಷ್ಟಗಳ ಸರಮಾಲೆಯ ರೀತಿ ಇದ್ದರೂ ಆಯ್ದುಕೊಂಡಿದ್ದು ಹಾಸ್ಯರಂಗವನ್ನು. 

 

10 ವರ್ಷಗಳಿಂದ ಹಾಸ್ಯ ಕಲಾವಿದರಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ದೆಹಲಿಯ ಕನ್ನಡಿಗರನ್ನೂ ಅವರು ನಗೆಗಡಲಲ್ಲಿ ತೇಲಿಸಿದ್ದಾರೆ. ಈವರೆಗೆ ಅವರು ನೀಡಿದ ಒಟ್ಟು ಪ್ರದರ್ಶನಗಳ ಸಂಖ್ಯೆ ನಾಲ್ಕು ಸಾವಿರಕ್ಕೂ ಹೆಚ್ಚು.

 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರುವ ‘ನಗೆಭಾರತ’, ಕಲರ್ಸ್‌ ಸೂಪರ್‌ನಲ್ಲಿ ಬರುವ ‘ಕಾಮಿಡಿ ಕಂಪನಿ’ ರಿಯಾಲಿಟಿ ಶೋಗಳಲ್ಲೂ ಪ್ರತಿಭೆ ಒರೆಗೆ ಹಚ್ಚಿದ್ದಾರೆ. ಕಿರುತೆರೆಯಲ್ಲಿ ಹಾಸ್ಯ ಕಲಾವಿದರಾಗಿ ಕಾಣಿಸಿಕೊಂಡಿದ್ದೇ ತಡ; ದೇವುಕುಮಾರ ಅಚ್ಚುಮೆಚ್ಚಿನ ನಟನಾಗಿದ್ದಾರೆ. ಇದನ್ನು ಕಂಡು ವಿವಿಧ ರೇಡಿಯೊ, ಸುದ್ದಿ ವಾಹಿನಿಗಳೂ ಕೂಡ ಅವರನ್ನು ಆಹ್ವಾನಿಸಿ ಹಾಸ್ಯ ಕಾರ್ಯಕ್ರಮಕ್ಕೆ ವೇದಿಕೆ ನೀಡಿವೆ.

 

ಶಾಲಾ ಹಂತದಲ್ಲಿ ಇದ್ದಾಗಲೇ ಇವರಲ್ಲಿ ಹಾಸ್ಯ ಪ್ರಜ್ಞೆ ಇರುವುದನ್ನು ಶಿಕ್ಷಕರು ಗುರುತಿಸಿದ್ದರು. ಸಭೆ, ಸಮಾರಂಭಗಳಲ್ಲಿ ಹಾಸ್ಯ ಪ್ರಸಂಗ ಹೇಳುತ್ತ ಬಿ.ಎ. ಓದಿದರು. ಕೆಲ ಸಾಮಾಜಿಕ ನಾಟಕಗಳಲ್ಲೂ ಪಾತ್ರ ನಿರ್ವಹಿಸಿ ಹಳ್ಳಿಗರ ಮನಸ್ಸು ಗೆದ್ದಿದ್ದಾರೆ.

 

ಮುಂದಿನ ತಿಂಗಳು ಬಿಡುಗಡೆ ಆಗಲಿರುವ ‘ಲೈಟ್‌ ಆಗಿ ಲವ್ವಾಗಿದೆ’ ಎಂಬ ಚಲನಚಿತ್ರದಲ್ಲಿ ಮುಖ್ಯ ವಿದೂಷಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಪಾಲಕರು ಇನ್ನೂ ಕೂಲಿ ಕೆಲಸ ಮಾಡಿಕೊಂಡಿದ್ದು, ಮಗನ ಸಾಧನೆಯಲ್ಲಿ ಸಂಕಷ್ಟ ಮರೆತಿದ್ದಾರೆ.

 

-ಸಂತೋಷ ಈ. ಚಿನಗುಡಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು